ಹೋರಾಟಗಾರ ಅಪ್ಪನಿಗೆ ಹೇಡಿ ಮಗ-ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್.ಚಂದ್ರಶೇಖರ್ ವಿರುದ್ಧ ತಂದೆ ವಾಗ್ದಾಳಿ

Public TV
3 Min Read
CM Lingappa Chandrashekhar copy

– ಬಿಜೆಪಿ ಸೇರಿದ್ದು ಮೊದಲ ತಪ್ಪು, ಚುನಾವಣೆ ವಿಥ್ ಡ್ರಾ ಮಾಡಿದ್ದು ಎರಡನೇ ತಪ್ಪು
– ಮಗನ ನಿರ್ಧಾರದ ಬಗ್ಗೆ ಮಾತನಾಡಲು ಅಸಹ್ಯ ಆಗ್ತಿದೆ
– ರಾಜಕೀಯದಲ್ಲಿ ಆತ ಬಲಿಪಶು

ಬೆಂಗಳೂರು: ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಚಂದ್ರಶೇಖರ್ ಅವರ ತಂದೆ ಹಾಗು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ.ಲಿಂಗಪ್ಪ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಮಗನ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಗ ಬಿಜೆಪಿ ಸೇರಿದ್ದಾಗಿನಿಂದ ನಾನು ಅವನ ಜೊತೆ ಮಾತನಾಡಿಲ್ಲ. ಅವನು ಚುನಾವಣೆಯಿಂದ ಹಿಂದೆ ಸರಿದಿರುವ ವಿಚಾರವೇ ನನಗೆ ಗೊತ್ತಿರಲಿಲ್ಲ. ಈ ರೀತಿ ಪಲಾಯನ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಒಬ್ಬ ಹೋರಾಟಗಾರ ಅಪ್ಪನಿಗೆ ಆತ ಹೇಡಿ ಮಗ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರನ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

chandrashekhar

ನನ್ನ ರಾಜಕೀಯ ಜೀವನದಲ್ಲಿ ಇಂತಹ ಬೆಳವಣಿಗೆಯನ್ನು ನಾನು ನೋಡಿಲ್ಲ. ಮತದಾನಕ್ಕೆ ಎರಡು ದಿನ ಮಾತ್ರ ಇದೆ. ನನ್ನ ಮಗ ಆಗಲಿ ಅಥವಾ ಯಾವುದೇ ಅಭ್ಯರ್ಥಿ ಈ ರೀತಿಯ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ಚುನಾವಣೆ ನಂತರ ತಮ್ಮ ಅಭಿಪ್ರಾಯವನ್ನು ಪಕ್ಷದ ಮುಖಂಡರ ಮುಂದೆ ಹೇಳಬಹುದಿತ್ತು. ಚುನಾವಣೆಯ ಮೊದಲೇ ಹಿಂದೆ ಬಂದಿರೋದು ಆತ ಸೋಲನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂದು ಮಗನ ನಿರ್ಣಯದ ಬಗ್ಗೆ ಸಿಎಂ ಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.

ಇದೊಂದು ರಾಜಕೀಯ ಆತ್ಮಹತ್ಯೆ:
ನನ್ನ ರಾಜಕೀಯ ಜೀವನದಲ್ಲಿ ರಾಮನಗರಕ್ಕೆ ದೇವೇಗೌಡರು, ಕುಮಾರಸ್ವಾಮಿ ಬಂದರೂ ಅಂತಾ ನಾನು ಎಲ್ಲಿ ಓಡಿ ಹೋಗಲಿಲ್ಲ. ಅಂಬರೀಶ್ ವಿರುದ್ಧ ನಿಂತಾಗಲೂ ಕೊನೆಯವರೆಗೂ ಹೋರಾಡಿದ್ದೇನೆ. ಚುನಾವಣೆಯಲ್ಲಿ ಫಲಿತಾಂಶ ಬರೋವರೆಗೂ ಹೋರಾಡುವುದು ಶೂರನ ಕರ್ತವ್ಯ. ಹೇಡಿಗಳು ಫಲಿತಾಂಶ ಮೊದಲೇ ಪಲಾಯನ ಮಾಡುತ್ತಾರೆ. ಇಂದು ನನ್ನ ಮಗ ತೆಗೆದುಕೊಂಡಿರುವ ನಿರ್ಧಾರ ಆತ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಸಮಾಧಾನ ಹೊರಹಾಕಿದರು.

CM LINGAPPA copy

ಕಾಂಗ್ರೆಸ್ ಸೇರುವ ನಿರ್ಧಾರದ ಬಗ್ಗೆ ಚಂದ್ರಶೇಖರ್ ನನ್ನ ಜೊತೆ ಚರ್ಚಿಸಿಲ್ಲ. ಒಂದು ವೇಳೆ ಆತ ನನ್ನ ಸಲಹೆ ಪಡೆದಿದ್ದರೆ ಚುನಾವಣೆಯಿಂದ ಹಿಂದೆ ಸರಿಯಲು ಬಿಡುತ್ತಿರಲಿಲ್ಲ. ಬಿಜೆಪಿಗೆ ಹೋಗಬೇಡ ಅಂತಾ ಮನೆಗೆ ಕರೆಸಿ ಹೇಳಿದ್ರೂ ನನ್ನ ಮತು ಕೇಳಲಿಲ್ಲ. ಕಾಂಗ್ರೆಸ್ ನಮಗೆ ರಕ್ತಗತವಾಗಿದ್ದು, ಬೇರೆ ಪಕ್ಷಗಳು ನಮಗೆ ಇಷ್ಟವಾಗಲ್ಲ. ಎರಡು ದಿನದಲ್ಲಿ ಚುನಾವಣೆಯನ್ನು ಮುಂದಿಟ್ಟು ಪಲಾಯನ ಮಾಡುವುದು ಯಾವ ಸಿದ್ಧಾಂತ? ಅವನ ರಾಜಕೀಯ ಸಿದ್ಧಾಂತಗಳು ಏನೆಂಬುವುದು ನನಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಮಗನನ್ನು ಕರೆಸಿಕೊಂಡು ಆತ ಅನುಸರಿಸುವ ಸಿದ್ಧಾಂತಗಳು ಏನು ಅಂತಾ ಮಾಹಿತಿ ಪಡೆದುಕೊಳ್ಳುತ್ತೇನೆ. ಚುನಾವಣೆಯಿಂದ ಪಲಾಯನ ಆಗುವರರನ್ನು ಶೂರರು ಅಂತಾ ಯಾರು ಕರೆಯಲ್ಲ ಎಂದು ವಾಗ್ದಾಳಿ ನಡೆಸಿದರು.

ಮಗ ಬಲಿಪಶು:
ಬಿಜೆಪಿಯವರು ಮಗನನ್ನು ಬಲಿಪಶು ಮಾಡಿದರೋ ಏನೋ ಗೊತ್ತಿಲ್ಲ. ರಾಜಕೀಯ ರಂಗದಲ್ಲಿ ನನ್ನ ಮಗ ಬಲಿಪಶು ಆಗಿದ್ದಾನೆ. ಕಳೆದ 25 ವರ್ಷಗಳಿಂದ ಆತ ರಾಜಕೀಯದಲ್ಲಿ ಇದ್ದಾನೆ. ನನ್ನ ನಡೆಯನ್ನು ಆತ ಗಮನಿಸುತ್ತಾ ಬಂದಿದ್ದಾನೆ. ಒಬ್ಬ ಹೋರಾಟಗಾರ ಅಪ್ಪನಿಗೆ ಆತ ಹೇಡಿ ಮಗ. ಯಾವತ್ತು ಆತ ರಾಜಕೀಯದ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಈ ಬಾರಿ ಟಿಕೆಟ್ ನಿನಗೆ ಕೊಡೋದು, ಎಲೆಕ್ಷನ್ ಗೆ ಸಿದ್ಧವಾಗು ಅಂತಾ ಹೇಳಿದ್ರು. ಆದ್ರೆ ಮಗ ಒಪ್ಪಿಕೊಳ್ಳಲಿಲ್ಲ. ಅನಿವಾರ್ಯವಾಗಿ ರಾಮನಗರ ಟಿಕೆಟ್ ಇಕ್ಬಾಲ್ ಹುಸೇನ್ ಅವರಿಗೆ ಸಿಕ್ಕಿತ್ತು. ಮಗನ ಈ ನಡವಳಿಕೆ ನೋಡಿ ನನಗೆ ಅಸಹ್ಯ ಆಗುತ್ತಿದೆ. ಈ ಕುರಿತು ಹೆಚ್ಚು ಮಾತನಾಡಲು ನನಗೆ ಮುಜುಗರ ಆಗ್ತಿದೆ. ಇಲ್ಲಿ ಕಾಂಗ್ರೆಸ್ ನಾಯಕರ ಯಾವುದೇ ಹಸ್ತಕ್ಷೇಪವಿಲ್ಲ. ಮಗ ಬಿಜೆಪಿಗೆ ಹೋಗಿದ್ದು ಮೊದಲನೇ ತಪ್ಪು, ಇವತ್ತು ಚುನಾವಣೆಯಿಂದ ಹಿಂದೆ ಬಂದಿದ್ದು ಎರಡನೇ ತಪ್ಪು. ಬೇರೆ ಯಾವ ಪಕ್ಷದ ನಾಯಕರ ಬಗ್ಗೆಯೂ ನಾನು ಪ್ರತಿಕ್ರಿಯೆ ನೀಡಲ್ಲ. ಮನೆಯಲ್ಲಿಯೂ ಆತ ನನ್ನ ಜೊತೆ ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದರು.

chandrashekhar Suresh

ನಾಮಪತ್ರ ಸಲ್ಲಿಸಲು ಹೋಗುವಾಗ ಆತನ ಆಪ್ತರು ನಿಮ್ಮ ತಂದೆಯ ಆಶೀರ್ವಾದ ಪಡೆದುಕೊಂಡು ಬಾ ಅಂತಾ ಸಲಹೆ ನೀಡಿದ್ದರಂತೆ. ಚಂದ್ರಶೇಖರ್ ನನ್ನ ಬಳಿಯೂ ಬರಲಿಲ್ಲ. ಒಂದು ವೇಳೆ ಆತ ಬಂದಿದ್ದರೂ ನನ್ನ ಕಾಲುಗಳನ್ನು ಮುಟ್ಟಲು ಸಹ ನಾನು ಬಿಡುತ್ತಿರಲಿಲ್ಲ ಎಂದು ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *