ರಾಮನಗರ: ವಿಧಾನಸಭಾ ಉಪಚುನಾವಣೆಯಲ್ಲಿ ನಡೆದ ಘಟನೆಯಿಂದ ನನಗೆ ರಾಜಕೀಯದ ಕೊನೆಯ ದಿನಗಳಿಗೆ ಹೋಗುವ ಪ್ರೇರಣೆ ಆಗುತ್ತಿದೆ. ಪಕ್ಷ ನೀಡಿರುವ ಜವಾಬ್ದಾರಿ ಪೂರ್ಣಗೊಳಿಸಿ ಮುಂದಿನ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿಎಂ ಲಿಂಗಪ್ಪ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಜನರು ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಇದನ್ನು ಗುರುತಿಸಿ ಪಕ್ಷದ ನಾಯಕರು ನನ್ನನ್ನು ಎಂಎಲ್‍ಸಿ ಮಾಡಿದ್ದಾರೆ. ನನ್ನ ಇನ್ನೂ 4 ವರ್ಷ ಅಧಿಕಾರದ ಅವಧಿ ಇದೆ. ಎಲ್ಲರ ನಿರೀಕ್ಷೆಯಂತೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಅಲ್ಲಿಗೆ ನನಗೆ 83 ವರ್ಷ ವಯಸ್ಸು ತುಂಬುತ್ತದೆ. ಬಳಿಕ ರಾಜಕೀಯವಾಗಿ ನಿವೃತ್ತಿಯಾಗುವ ಚಿಂತನೆ ಮಾಡುತ್ತೇನೆ ಎಂದರು.
Advertisement
Advertisement
ಸಾಯೋವರೆಗೂ ಮಾತನಾಡಲ್ಲ:
ತಮ್ಮ ಮಗ ಎಲ್ ಚಂದ್ರಶೇಖರ್ ಮಾಡಿದ್ದು ಕ್ಷಮಿಸಲಾರದ ಅಪರಾಧ. ನಮ್ಮದು ಕಾಂಗ್ರೆಸ್ ಕುಟುಂಬವಾಗಿದ್ದುಕೊಂಡು ಆತ ಬಿಜೆಪಿಗೆ ಹೋಗಿದ್ದು ಮೊದಲ ತಪ್ಪು. ಆತ ಮಾಡಿದ ಎಡವಟ್ಟು ಕ್ಷಮಿಸಿ ಮುದ್ದಾಡವಂತಹದ್ದು ಅಲ್ಲ. ನಾನು ಸಾಯುವ ತನಕ ಆತನ ಜೊತೆ ಮಾತನಾಡುವುದಿಲ್ಲ ಎಂದರು.
Advertisement
ಬಿಜೆಪಿ ನಾಯಕರ ಕ್ಷಮೆ:
ಮಗ ಮಾಡಿದ ಕೆಲಸಕ್ಕೆ ಅಪ್ಪನಾಗಿ ನಾನೇನು ಮಾಡಬೇಕು. ನಮ್ಮ ಮನೆಯಲ್ಲಿ ಕಳೆದ ಕೆಲ ದಿನಗಳಿಂದ ಸೂತಕದ ಛಾಯೆ ಆವರಿಸಿದೆ. ಅವರ ಅಮ್ಮ ಕಳೆದ ಗುರುವಾರದಿಂದ ಊಟ ಬಿಟ್ಟಿದ್ದಾರೆ. ಈಗ ತಂದೆಯಾಗಿ ನಾನೇನು ಮಾಡಬೇಕು ಹೇಳಿ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಸಾವಿರಾರು ಜನಕ್ಕೆ ಬೇಸರ, ನಿರಾಸೆ, ಅವಮಾನ ತಂದೊಡ್ಡಿದ್ದ ಮಗನಿಂದ ತಂದೆಯಾಗಿ ನೈತಿಕ ಹೊಣೆಗಾರಿಕೆ ಹೊತ್ತು ಪಕ್ಷಾತೀತವಾಗಿ ಆತನ ಬೆಂಬಲಕ್ಕೆ ನಿಂತಿದ್ದ ತಾಲೂಕಿನ ಜನರು, ಪಕ್ಷದ ಮುಖಂಡರಿಗೆ ಹಾಗೂ ಬಿಜೆಪಿಗೆ ಹೋದ ಮಗನಿಗೆ ಟಿಕೆಟ್ ಕೊಟ್ಟವರಲ್ಲೂ ಕೂಡ ಕ್ಷಮೆಯಾಚಿಸುವುದಾಗಿ ಕೈ ಮುಗಿದರು.
Advertisement
ಹೇಡಿ ಕೃತ್ಯ:
ಚುನಾವಣೆ ವೇಳೆ ಬಳ್ಳಾರಿಯಲ್ಲಿ ಇದ್ದರೂ ಎಲ್ಲಾ ಮಾಹಿತಿ ಲಭಿಸುತಿತ್ತು. ಚುನಾವಣೆಯಲ್ಲಿ ಸೋಲಾಗಬಹುದು, ಆದರೆ ಅದು ಯುದ್ಧ, ಹೋರಾಟ. ಯುದ್ಧಕ್ಕೆ ನಿಂತು ಪಲಾಯನ ಮಾಡುವುದು ಹೇಡಿಗಳ ಕೃತ್ಯ. ಅದು ಒಬ್ಬ ಹೇಡಿ ಮಾಡುವಂತಹದ್ದು, ಇಂತಹ ಘಟನೆ ಬೇರೆ ಯಾವ ಪಕ್ಷದಲ್ಲೂ ಆಗದಿರಲಿ ಎಂದರು. ಇದೇ ವೇಳೆ ನಾನು ಡಿಕೆ ಸಹೋದರರ ಟಾರ್ಗೆಟ್ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅನಿತಾ ಕುಮಾರಸ್ವಾಮಿಯವರನ್ನ ಗೆಲ್ಲಿಸಬೇಕು. ಬಿಜೆಪಿಗೆ ಇರಿಸುಮುರಿಸಿ ಉಂಟು ಮಾಡಬೇಕು ಎಂಬುದು ಅವರ ಉದ್ದೇಶ ಅಷ್ಟೇ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv