ರಾಮನಗರ: ನಮ್ಮದು ಧರ್ಮ ನಿರಪೇಕ್ಷೆ ದೇಶವಾಗಿದ್ದರೂ ಒಂದು ಧರ್ಮೀಯರ ವಿರುದ್ಧ ಬಿಜೆಪಿ ಹಗೆ ಸಾಧಿಸಲು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ ಎಂದು ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಕಿಡಿಕಾರಿದರು.
ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರ ಹಿಡನ್ ಅಜೆಂಡಾ ಸಂವಿಧಾನವನ್ನ ಮುಗಿಸುವುದಾಗಿದೆ. ಈ ಮೂಲಕ ದೇಶದಲ್ಲಿನ ಮುಸ್ಲಿಮರನ್ನ ಹೇಗಾದರೂ ರಾಷ್ಟ್ರದಿಂದ ಹೊರಗೆ ಹಾಕಿ ಹಿಂದೂ ರಾಷ್ಟ್ರವನ್ನ ಸೃಷ್ಟಿ ಮಾಡಬೇಕು, ಒಂದೇ ಸಂಸ್ಕೃತಿ ತರಬೇಕು. ಅಲ್ಲದೆ ಒಂದು ದೇಶ ಒಂದು ಚುನಾವಣೆ ಜಾರಿಗೆ ತರಬೇಕು ಎಂಬ ಗುಪ್ತ ಪ್ರಣಾಳಿಕೆಯನ್ನ ಹೊಂದಿದೆ ಎಂದು ತಿಳಿಸಿದರು.
Advertisement
Advertisement
ಈಗಾಗಲೇ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಂಗದ ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ನ್ಯಾಯದ ಪರ ತೀರ್ಪು ಸಿಗಲಿದೆ. ಆದರೆ ಬಿಜೆಪಿಯ ಈ ನಿಲುವು ಜನಾಂಗ ತಾರತಮ್ಯ ಸಂವಿಧಾನ ದೃಷ್ಟಿಯಲ್ಲಿ ಸಾರ್ಥಕವಾಗುವುದಿಲ್ಲ. ಇವರ ವರ್ತನೆ ಇದೇ ರೀತಿ ನಡೆದರೆ ಬೃಹತ್ ಸಂವಿಧಾನ ರಾಷ್ಟ್ರ ಬಹುದಿನ ಉಳಿಯುವುದಿಲ್ಲ ಎಂದರು.
Advertisement
ಬಾಬಾ ರಾಮ್ ದೇವ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, ಸ್ವಾಮೀಜಿಯೊಬ್ಬರು ದೇಶಕ್ಕೆ ಒಂದೇ ಭಾಷೆ ಇರಬೇಕು ಅದು ಹಿಂದಿಯಾಗಿರಬೇಕು ಎನ್ನುತ್ತಾರೆ. ಇನ್ನೊಬ್ಬರು ದೇಶಾದ್ಯಂತ ಒಂದೇ ರೇಷನ್ ಕಾರ್ಡ್ ಇರಬೇಕು ಎನ್ನುತ್ತಾರೆ. ಮುಂದೊಂದು ದಿನ ಇವರು ತೊಡುವ ವಸ್ತ್ರವನ್ನೇ ಎಲ್ಲರೂ ತೊಡಬೇಕು ಎಂದೂ ಹೇಳುತ್ತಾರೆ ಎಂದು ಕಿಡಿಕಾರಿದರು.
Advertisement
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಹುಚ್ಚು ದರ್ಬಾರ್ ನಡೆಸುತ್ತಿದೆ. ಅವರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.24ರ ಮಂಗಳವಾರ ಪ್ರತಿಭಟನೆ ನಡೆಸುತ್ತೇವೆ. ಶಾಂತಿಯುತವಾಗಿ ನಗರದ ರೈಲ್ವೆ ನಿಲ್ದಾಣದಿಂದ ಡಿಸಿ ಕಚೇರಿ ವರೆಗೆ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ತಲುಪಿಸಲಾಗುವುದು ಎಂದು ತಿಳಿಸಿದರು.