ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷವೇ ಕಳೆದಿದೆ. ಒಂದು ವರ್ಷವಾದ್ರೂ ಶಾಸಕರ ಆಂತರಿಕ ಕಲಹ, ಸರ್ಕಾರದ ವಿರುದ್ಧದ ಹೇಳಿಕೆಗಳನ್ನು ನೀಡೋದು ಕಡಿಮೆಯಾದಂತೆ ಕಾಣುತ್ತಿಲ್ಲ. ಕೆಲ ಶಾಸಕರು ಬಂಡಾಯ ಬಾವುಟ ಹಿಡಿದು ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲೋಕ ಸಮರದ ಫಲಿತಾಂಶದ ಬಳಿಕ ಈ ಬಂಡಾಯದ ಕೂಗು ಜೋರಾಗಿತ್ತು. ಹೀಗಾಗಿ ಮೈತ್ರಿ ಉಳಿಸಿಕೊಳ್ಳಲು ಸ್ವತಃ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ.
Advertisement
ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯ ಅಧ್ಯಕ್ಷ, ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕರಾಗಿರುವ ಸಿದ್ದರಾಮಯ್ಯನವರ ಸಹಾಯದಿಂದ ಸಿಎಂ ಕುಮಾರಸ್ವಾಮಿ ಮೂರು ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂರು ಸೂತ್ರಗಳಂತೆ ಸರ್ಕಾರದಲ್ಲಿ ಬದಲಾವಣೆಗಳನ್ನು ತಂದರೆ ಮೈತ್ರಿ ಸುರಕ್ಷಿತವಾಗಿರಲಿದೆ ಎಂಬುವುದು ಸಿಎಂ ಲೆಕ್ಕಾಚಾರವಾಗಿದೆ.
Advertisement
ಸಿಎಂ ‘ತ್ರೀ’ ಅಸ್ತ್ರ:
1. ಶೀಘ್ರದಲ್ಲಿ ಸಂಪುಟ ಪುನಾರಚನೆ ಮಾಡಿ, 11 ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವುದು. ಈ ಸಂದರ್ಭದಲ್ಲಿ ಹಾಲಿ 8 ಸಚಿವರಿಗೆ ಕೊಕ್ ಕೊಡುವುದು. ಸದ್ಯ ಜೆಡಿಎಸ್ ಬಳಿ 1, ಕಾಂಗ್ರೆಸ್ ಬಳಿ 2 ಸಚಿವ ಸ್ಥಾನವನ್ನು ಉಳಿಸಿಕೊಂಡಿವೆ. ಪುನಾರಚನೆ ವೇಳೆ ಕಾಂಗ್ರೆಸ್‍ನಿಂದ 5, ಜೆಡಿಎಸ್‍ನಿಂದ ಮೂರು ಸಚಿವರ ಮನವೊಲಿಸಿ ರಾಜೀನಾಮೆ ಕೊಡಿಸುವುದು. ರಾಜೀನಾಮೆ ಬಳಿಕ ಉಳಿಯುವ 11 ಸಚಿವ ಸ್ಥಾನಗಳನ್ನು ಅತೃಪ್ತ ಶಾಸಕರಿಗೆ ನೀಡುವುದು.
Advertisement
Advertisement
2. ಬಂಡಾಯದ ಮುಂಚೂಣಿಗಾರರಿಗೆ ದೊಡ್ಡ ದೊಡ್ಡ ಖಾತೆಗಳನ್ನು ತ್ಯಾಗ ಮಾಡಲು ಸಿಎಂ ಮುಂದಾಗಲಿದ್ದಾರಂತೆ. ಇತ್ತ ಆದಾಯ ತರುವ ಖಾತೆಗಳನ್ನು ಪಡೆದುಕೊಂಡಿದ್ದ ಜೆಡಿಎಸ್ ಸಚಿವರು ಸರ್ಕಾರ ಉಳಿವಿಗಾಗಿ ತ್ಯಾಗ ಮಾಡೋದು. ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ ಕಂದಾಯ ಇಲಾಖೆಗಳಲ್ಲಿ ಬದಲಾವಣೆ ತರುವುದು.
3. ಶಾಸಕ ರಮೇಶ್ ಜಾರಕಿಹೊಳಿ ನೀರಾವರಿ ಖಾತೆಗೆ ಬೇಡಿಕೆ ಜೊತೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಂಪುಟದಿಂದ ದೂರವಿಡಬೇಕೆಂದು ಪಟ್ಟು ಹಿಡಿದಿದ್ದಾರಂತೆ. ರಮೇಶ್ ಜಾರಕಿಹೊಳಿ ಅವರ ಬೇಡಿಕೆಗಳ ಕುರಿತಾಗಿ ಗಂಭೀರವಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಉಳಿದಂತೆ ಪ್ರಮುಖ ಶಾಸಕರಿಗೆ ನಿಗಮ ಮಂಡಳಿಗಳ ಸ್ಥಾನ ಪಟ್ಟ ನೀಡುವ ಮೂಲಕ ಎಲ್ಲರನ್ನು ಶಾಂತಗೊಳಿಸುವುದು.
ಈ ಮೂರು ಅಸ್ತ್ರಗಳನ್ನು ಕ್ರಮಬದ್ಧವಾಗಿ ಪ್ರಯೋಗಿಸಿದರೆ ಸರ್ಕಾರವನ್ನು ಆಪರೇಷನ್ ಕಮಲದ ಭೀತಿಯಿಂದ ತಪ್ಪಿಕೊಳ್ಳಲು ಸಾಧ್ಯ ಎಂಬುವುದು ಸಿಎಂ ಲೆಕ್ಕಾಚಾರವಾಗಿದೆ ಎನ್ನಲಾಗಿದೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಯಾವುದೇ ಸಂಪುಟ ಪುನಾರಚನೆ ಇಲ್ಲ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸೋಮವಾರ ವಿಧಾನಸೌಧದ ಆವರಣದ ಮರದಡಿಯಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಕರೆಸಿಕೊಂಡು ಡಿಸಿಎಂ ಜೊತೆ ಸೇರಿ ಸಿಎಂ ಕೆಲಕಾಲ ಮಾತುಕತೆ ನಡೆಸಿದ್ದು, ಚರ್ಚೆಗೆ ಗ್ರಾಸವಾಗಿದೆ.