ಶಿವಮೊಗ್ಗ: ಚುನಾವಣೆಗೆ ಇನ್ನೆರಡು ದಿನ ಇರುವಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅನಾರೋಗ್ಯದ ಕತೆ ಹೇಳಿ ಹಾಸಿಗೆ ಹಿಡಿಯಬಹುದು. ಆದರೆ ಏ.18ರ ನಂತರ ಆರೋಗ್ಯವಾಗಿ ಓಡಾಡಿಕೊಂಡಿರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ತಾಲೂಕಿನ ಗಾಜನೂರಿನ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಕುಮಾರಸ್ವಾಮಿ, ನನ್ನ ಆರೋಗ್ಯ ಸರಿಯಿಲ್ಲ ನಾನು ಎಷ್ಟು ದಿನ ಬದುಕುತ್ತೇನೆ ಗೊತ್ತಿಲ್ಲ. ಹಾಗಾಗಿ ಮತ ಕೊಡಿ ಎಂದು ಹೇಳುತ್ತಾರೆ” ಎಂದು ವ್ಯಂಗ್ಯವಾಡಿದರು.
55 ವರ್ಷದ ಕುಮಾರಸ್ವಾಮಿಗಳೇ ಅನಾರೋಗ್ಯದ ಬಗ್ಗೆ ಮಾತನಾಡಿದರೆ, 69 ವರ್ಷದ ಮೋದಿ ಬಗ್ಗೆ ಇನ್ನೇನು ಹೇಳಬೇಕು ಹೇಳಿ ಎಂದು ಪ್ರಶ್ನಿಸಿದ್ದಾರೆ. ದೇವೇಗೌಡರ ಕುಟುಂಬವೇ ರಾಜಕಾರಣದಲ್ಲಿ ಪಾದಾರ್ಪಣೆ ಮಾಡಿದೆ. ಆದರೆ ಜೆಡಿಎಸ್ ವರಿಷ್ಠ ದೇವೇಗೌಡರ ಮನೆಯಲ್ಲೂ ಮೋದಿಗೆ ಮತ ಹಾಕುವರಿದ್ದಾರೆ. ಮೋದಿ ತನ್ನ ವಿಪಕ್ಷದವರ ಮನೆಯಲ್ಲೂ ಮತ ಪಡೆಯುವ ಕೆಲಸ ಮಾಡಿದ್ದಾರೆ. ತೋರಿಕೆಗೆ ಅವರು ಮೋದಿಯನ್ನು ವಿರೋಧಿಸುತ್ತಾರೆ. ಏಕೆಂದರೆ ಮೋದಿಯ ಆಡಳಿತದ ದಿಟ್ಟತನ ಅಷ್ಟು ಪಾರದರ್ಶಕವಾಗಿದೆ ಎಂದರು.
ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡಿದ ಬಿ.ಎಲ್ ಸಂತೋಷ್, ಪಾಕಿಸ್ತಾನದ ಬಾಲಕೋಟ್‍ನಲ್ಲಿರುವ ಭಯೋತ್ಪಾದಕರ ಕೇಂದ್ರದ ಮೇಲೆ ಸೇನೆ ಕಾರ್ಯಾಚರಣೆ ನಡೆಸಿದಾಗ ನಮ್ಮ ವಿಪಕ್ಷಗಳು ಸಾಕ್ಷಿ ಕೊಡಿ ಎನ್ನುತ್ತಿವೆ. ಆದರೆ ಅಡಿಕೆ ಮರಕ್ಕೆ, ಫಸಲಿಗೆ ಹತ್ತಿದ ಹುಳ ನಾಶವಾಗಲಿ ಎಂದು ಔಷಧಿ ಹೊಡೆಯುತ್ತಾರೆ. ಅದು ಸತ್ತಮೇಲೆ ಯಾವನು ಲೆಕ್ಕ ಹಾಕುತ್ತಾ ಕೂರಲ್ಲ ಎಂದರು. ಪಾಕ್ ಮೇಲೆ ದಾಳಿ ನಡೆಸಲು ಸಾಮಾಜಿಕ ಘಾತುಕ ಶಕ್ತಿಯನ್ನು ನಿಗ್ರಹಿಸಲು ಪ್ರಬಲ ನಾಯಕತ್ವ ಬೇಕು ಅದನ್ನು ಮೋದಿ ತೋರಿಸಿದ್ದಾರೆ ಎಂದು ಹೇಳಿದರು.