ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಹಾಸನದ ಹಾಸನಾಂಬೆ ದೇವಿಯ ದರ್ಶನ ಇಂದಿನಿಂದ ಆರಂಭವಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇವಾಲಯಕ್ಕೆ ಭೇಟಿ ನೀಡಿ ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ.
ಆಶ್ವೀಜ ಮಾಸದ ಮೊದಲ ಗುರುವಾರ ಅಂದರೆ ಇಂದು ಮಧ್ಯಾಹ್ನ 12.30 ರ ನಂತರ ದೇವಾಲಯದ ಗರ್ಭಗುಡಿ ಬಾಗಿಲು ತೆರೆದಿತ್ತು. ಹೀಗಾಗಿ ಸಾರ್ವಜನಿಕ ದರ್ಶನ ಆರಂಭದ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ದೇವಿಯ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಸಿಎಂ ಕುಮಾರಸ್ವಾಮಿ ಅವರು ಕೂಡ ತಾಯಿ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ನಾನೂ ಕೂಡ ಇವತ್ತು ದೇವರ ದರ್ಶನಕ್ಕೆ ಬಂದಿದ್ದೇನೆ. ದೇವಾಲಯಕ್ಕೆ ಭಕ್ತರ ಸಂಖ್ಯೆಯ ಹೆಚ್ಚಳಕ್ಕೆ ಮಾಧ್ಯಮದ ಪಾತ್ರ ಮುಖ್ಯವಾಗಿದೆ ಎಂದರು.
Advertisement
Advertisement
ಹಾಸನಾಂಬೆ ಅಪನಂಬಿಕೆ ಬಗ್ಗೆ ಪ್ರತಿಕ್ರಿಯಿಸಿ ಪವಾಡಗಳಲ್ಲಿ ನಂಬಿಕೆ ನಿನ್ನೆಮೊನ್ನೆಯಿಂದ ಆರಂಭವಾದದ್ದಲ್ಲ. ಹಲವಾರು ತಲೆಮಾರುಗಳಿಂದ ಈ ನಂಬಿಕೆ ಇದೆ. ನನ್ನ ಸಾರ್ವಜನಿಕ ಬದುಕಿಗೆ ಈ ದೇವರುಗಳ ನಂಬಿಕೆಯೇ ಕಾರಣ. ಹಾಸನಾಂಬೆ ತಾಯಿಯ ಬಗ್ಗೆ ಸಂಶಯ ಮಾಡುವುದರಿಂದ ನಿಮಗೆ ಏನು ಸಿಗುತ್ತದೆ. ನಂಬಿಕೆಗಳಿಗೆ ಅಪಚಾರ ತರುವುದು ಸೂಕ್ತ ಅಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹಲವಾರು ಮಂದಿ ಭಕ್ತರ ನಂಬಿಕೆಗೆ ಧಕ್ಕೆ ತರುವುದು ತರವಲ್ಲ. ಪ್ರಕೃತಿ ವಿಕೋಪಗಳೆಲ್ಲ ಆಗುವುದು ಸಹ ಯಾವುದೋ ಒಂದು ಶಕ್ತಿಯಿಂದ ಹಾಸನಾಂಬೆ ದರ್ಶನಕ್ಕೆ ಕುರಿತು ಯಾವುದೇ ಗೊಂದಲ ಇಲ್ಲ. ಭಕ್ತರು ಪ್ರತಿವರ್ಷದಂತೆ ದರ್ಶನ ಪಡೆಯುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ನಮ್ಮ ಜೀವನದ ಏರುಪೇರುಗಳನ್ನು ಸರಿಮಾಡಿಕೊಳ್ಳುವುದಕ್ಕೆ ಇದರ ಉಪಯೋಗ ಪಡೆದುಕೊಳ್ಳಬೇಕು. ಕಾಣದ ಶಕ್ತಿ ಎನ್ನುವುದು ನಮ್ಮ ನಂಬಿಕೆ ಆಗಿದೆ. ರಾಜ್ಯದ ಎಲ್ಲ ಕುಟುಂಬಗಳಿಗೆ ಸುಭೀಕ್ಷೆ ಮತ್ತು ನೆಮ್ಮದಿ ಜೀವನ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ನನಗೆ ನೀಡಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv