ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಸಿದ್ದರಾಮಯ್ಯ ಅವರ ಪಾತ್ರ ದೊಡ್ಡದಿದೆ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಬ್ಯಾಟ್ ಬೀಸಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಎಚ್‍ಡಿಕೆ, ಸಿದ್ದರಾಮಯ್ಯ ಅವರು ಶಾಂತಿವನದಲ್ಲಿ ಸ್ನೇಹಿತರೊಂದಿಗೆ ಮಾಡಿರುವುದು ರಾಜಕೀಯ ವಿಶ್ಲೇಷಣೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಅವರಿಗೆ ಯಾವ ಭಿನ್ನಾಭಿಪ್ರಾಯವಿಲ್ಲ. ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಅವರ ಪಾತ್ರ ದೊಡ್ಡದಿದೆ. ಈ ಸರ್ಕಾರ ಮುನ್ನಡೆಯುವಲ್ಲಿ ಅವರು ಸದಾ ನಮ್ಮ ಬೆಂಬಲಕ್ಕಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಶಾಂತಿ ವನದಲ್ಲಿ ಸ್ನೇಹಿತರೊಂದಿಗೆ ಮಾಡಿರುವುದು ರಾಜಕೀಯ ವಿಶ್ಲೇಷಣೆ.
ಸಮ್ಮಿಶ್ರ ಸರ್ಕಾರದ ಬಗ್ಗೆ ಅವರಿಗೆ ಯಾವ ಭಿನ್ನಾಭಿಪ್ರಾಯವಿಲ್ಲ. ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಅವರ ಪಾತ್ರ ದೊಡ್ಡದಿದೆ. ಈ ಸರ್ಕಾರ ಮುನ್ನಡೆಯುವಲ್ಲಿ ಅವರು ಸದಾ ನಮ್ಮ ಬೆಂಬಲಕ್ಕಿರುತ್ತಾರೆ: ಸಿಎಂ
— CM of Karnataka (@CMofKarnataka) June 29, 2018
ಈ ಟ್ವೀಟ್‍ನೊಂದಿಗೆ ಸಮ್ಮಿಶ್ರದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಟೀಕೆ ಮಾಡುತ್ತಿದ್ದ ವಿರೋಧಿ ಪಕ್ಷದ ನಾಯಕರಿಗೆ ಎಚ್‍ಡಿಕೆ ಸಂದೇಶ ರವಾನಿಸಿದ್ದಾರೆ. ಇದಕ್ಕೂ ಮುನ್ನ ಮೈಸೂರು ಶಾಂತಿವನದಲ್ಲಿ ಚಿಕಿತ್ಸೆ ಪಡೆದು ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತಾನಾಡಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಗರಂ ಆಗಿದ್ದರು.
ಯಾರ ಹತ್ತಿರವೂ ನಾವು ಮಾತನಾಡಬಾರದು. ನೀವು ಅದನ್ನು ದೊಡ್ಡದು ಮಾಡುತ್ತೀರಿ. ನಾನು ಸಹಜವಾಗಿ ಮಾತನಾಡುತ್ತಿದ್ದಾಗ ವಿಡಿಯೋ ಮಾಡಿಕೊಳ್ಳಲಾಗಿದ್ದು, ಆ ವಿಡಿಯೋದಲ್ಲಿ ಹಿಂದಿನ ಹಾಗೂ ಮುಂದಿನ ದೃಶ್ಯ ಕತ್ತರಿಸಿ ಜನರಲ್ಲಿ ದ್ವಂದ್ವತೆ ಉಂಟು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಬಿಜೆಪಿ ಒಂದು ಕೋಮುವಾದಿ ಸರ್ಕಾರ. ಹೀಗಾಗಿ ಅದನ್ನು ಅಧಿಕಾರಕ್ಕೆ ಬರಬಾರದು ಎನ್ನುವುದಕ್ಕೆ ಜೆಡಿಎಸ್ ಜೊತೆ ಕೈ ಜೋಡಿಸಿದ್ದೇವೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ ಎಂದು ಸ್ಪಷ್ಟನೆ ನೀಡಿದ್ದರು.