ಬೆಂಗಳೂರು: ಪೊಲೀಸರ ಬಹು ದಿನಗಳ ಬೇಡಿಕೆ ಈಡೇರುವ ಸಮಯ ಹತ್ತಿರ ಬಂದಿದೆ. ಪೊಲೀಸರ ಬಹು ವರ್ಷಗಳ ಬೇಡಿಕೆಯಾದ ವೇತನ ಪರಿಷ್ಕರಣೆ ಮತ್ತು ಮೂಲಭೂತ ಸೌಲಭ್ಯಗಳ ಹೆಚ್ಚಳ ಕುರಿತು ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಪೊಲೀಸರ ವೇತನವನ್ನು ಶೇ.30 ಏರಿಕೆ ಮಾಡುವಂತೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸು ವರದಿ ಜಾರಿ ವಿಚಾರದ ಬಗ್ಗೆ ಇಂದು ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು, ಗೃಹ ಸಚಿವ ಎಂಬಿ ಪಾಟೀಲ್, ಡಿಜಿ-ಐಜಿ ನೀಲಮಣಿ ರಾಜು ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಹಳ ವರ್ಷಗಳಿಂದ ವೇತನ ಪರಿಷ್ಕರಣೆ ಪೊಲೀಸರ ಬೇಡಿಕೆಯಾಗಿದೆ. ಬಂದ ಸರ್ಕಾರಗಳು ಜಾರಿ ಮಾಡುತ್ತೇವೆ ಎನ್ನುತ್ತಲೇ ಕಾಲ ಕಳೆದಿತ್ತು. ಹೀಗಾಗಿ ಇಂದಿನ ಸಭೆ ಪೊಲೀಸರ ಪಾಲಿಗೆ ಮಹತ್ವದ ಸಭೆ ಎನ್ನಿಸಿದೆ. ಈಗಾಗಲೇ ಔರಾದ್ಕರ್ ವರದಿ ಜಾರಿಗೆ ಸಿದ್ದ ಎಂದಿರುವ ಸಿಎಂ ಕುಮಾರಸ್ವಾಮಿ, ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರಿಗೆ ಇಂದು ಸಿಹಿಯೋ- ಕಹಿಯೋ ಎನ್ನುವ ಕುತೂಹಲ ಮೂಡಿಸಿದೆ.