ಬೆಂಗಳೂರು: ನಾನು ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡ್ತಿದ್ದೇನೆ ಅಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿಲ್ಲ ಅಂತ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲ ಮಾಧ್ಯಮಗಳು ಊಹೆ ಮಾಡಿಕೊಂಡು ಸುದ್ದಿ ಮಾಡ್ತಿವೆ. ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ಇವೆಲ್ಲ ಕಪೋಲ ಕಲ್ಪಿತ ಸುದ್ದಿಗಳಷ್ಟೇ. ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಆದ ವಿಷಯವೇ ಬೇರೆ. ಕೆಲ ಮಾಧ್ಯಮಗಳು ಸುದ್ದಿ ಸೃಷ್ಟಿ ಮಾಡುತ್ತಿರುವುದೇ ಬೇರೆ. ಇದಕ್ಕೆ ಏನು ಉತ್ತರ ಕೊಡಲಿ ಅಂತ ಗೊತ್ತಿಲ್ಲ ಎಂದು ಮಾಧ್ಯಮಗಳ ಮೇಲೆ ಗರಂ ಆಗಿ ಪ್ರತಿಕ್ರಿಯೆ ನೀಡಿದರು.
ಬಳಿಕ ಸ್ಟೀಲ್ ಬ್ರಿಡ್ಜ್ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಬೆಂಗಳೂರಿನ ಜನರ ಸಮಸ್ಯೆ ನಿವಾರಣೆ ಮಾಡೋದು ಮುಖ್ಯ. ಇದಕ್ಕೆ ನನ್ನ ಮೊದಲ ಆದ್ಯತೆ ಕೊಡುತ್ತೇನೆ. ಈ ವಿಚಾರವಾಗಿ ನನಗೆ ಯಾವುದೇ ಒತ್ತಡಗಳು ಇಲ್ಲ ಅಂತ ಸ್ಪಷ್ಟಪಡಿಸಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೇವೇಗೌಡರಿಗೆ ಭಸ್ಮಾಸುರ ಎಂದ ವಿಚಾರವಾಗಿ ಮಾತನಾಡಿ, ಯತ್ನಾಳ್ ಬಿಜೆಪಿ ಬಿಟ್ಟು ಜೆಡಿಎಸ್‍ಗೆ ಬಂದಾಗ ಬಿಜೆಪಿ ಪಕ್ಷದ ಬಗ್ಗೆ ಏನು ಮಾತಾಡಿದ್ರು ಅಂತ ನನಗೆ ಗೊತ್ತಿದೆ. ಈಗ ಬಿಜೆಪಿಗೆ ಸೇರಿಕೊಂಡು ಏನೇನೋ ಮಾತಾಡ್ತಿದ್ದಾರೆ. ಅಂತಹ ವ್ಯಕ್ತಿಗೆ ಉತ್ತರ ಕೊಡೋದು ಸೂಕ್ತವಲ್ಲ ಎಂದರು.
ಯಾದಗಿರಿಯ ಸುರಪುದಲ್ಲಿ ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ ಪ್ರಕರಣ ತನಿಖೆಗೆ ಆದೇಶ ನೀಡಿದ್ದೇನೆ. ಈಗಾಗಲೇ ಡಿಸಿ, ಎಸ್ಪಿ, ಸಿಇಓ ಜೊತೆ ಚರ್ಚೆ ಮಾಡಿ ಸ್ಥಳಕ್ಕೆ ಭೇಟಿ ನೀಡಲು ಸೂಚನೆ ನೀಡಿದ್ದೇನೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನೀರಿಗೆ ಕ್ರಿಮಿನಾಶಕ ಬೆರೆಸಿರುವ ಬಗ್ಗೆ, ತನಿಖೆಗೆ ನೀರನ್ನು ಲ್ಯಾಬ್‍ಗೆ ಕಳುಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ ಅಂತ ತಿಳಿಸಿದರು.
ಶಾಲೆಗಳಲ್ಲಿ ಹಿಂದಿ ಕಡ್ಡಾಯ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸಿಎಂ ಚುನಾವಣೆ ಗಿಮಿಕ್ ಅಂತ ಬಣ್ಣಿಸಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಕೇಂದ್ರ ಸರ್ಕಾರ ಈ ಹಂತದಲ್ಲಿ ಯಾವುದೇ ನಿರ್ಧಾರ ಮಾಡಿದರೂ ಅದಕ್ಕೆ ಮಾನ್ಯತೆ ಇಲ್ಲ. ಇದು ನನ್ನ ಅಭಿಪ್ರಾಯ. ಸಮ್ಮಿಶ್ರ ಸರ್ಕಾರ 5 ವರ್ಷಗಳ ಸುಭದ್ರವಾಗಿ ನಡೆಯುತ್ತೆ. ನಾವು ಸುಗಮವಾಗಿ ಅವಧಿ ಮುಗಿಸುತ್ತೇವೆ. ಸರ್ಕಾರದ ಬಗ್ಗೆ ಯಾರಿಗೂ ಅಪನಂಬಿಕೆ ಬೇಡ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv