ನಾನು ಮಾತನಾಡಲ್ಲ – ಮಾಧ್ಯಮಗಳ ಪ್ರಶ್ನೆಗೆ ಮೌನಕ್ಕೆ ಶರಣಾದ ಸಿಎಂ

Public TV
3 Min Read
HDK 2

ಬೆಂಗಳೂರು: ಇಂದು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಿಎಂ ಮೌನಕ್ಕೆ ಜಾರಿದ್ದು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ತಮ್ಮ ಮುನಿಸನ್ನು ಮುಂದುವರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿಎಂ ಅವರ ಪ್ರತಿಕ್ರಿಯೆ ಕೇಳಿದ್ದಾಗ ಕೈಯಲ್ಲೇ ಸನ್ನೇ ಮಾಡಿ ಮಾತನಾಡಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳ ಮೇಲೆ ಸಿಎಂ ಮುನಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಂಡ್ಯ ರಾಜಕಾರಣದ ಬಗ್ಗೆ ಪ್ರಶ್ನಿಸಿದ್ದಾಗಲೂ ಕೂಡ ಸಿಎಂ ಗರಂ ಆಗಿದ್ದರು. ಮಾಧ್ಯಮಗಳಿಗೆ ಈಗ ಉತ್ತರ ನೀಡಲ್ಲ. ಮೇ 23ಕ್ಕೆ ಉತ್ತರ ನೀಡುತ್ತೇನೆ. ಮಂಡ್ಯ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುತ್ತೀರಿ. ನೀವು ನಮ್ಮ ಕುಟುಂಬ ಹಾಗೂ ನಮ್ಮ ಹೇಳಿಕೆಗಳನ್ನು ಹಿಡಿದು ವ್ಯಂಗ್ಯವಾಡುತ್ತೀರ. ನಿಮಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹರಿಹಾಯ್ದಿದ್ದರು. ಹಾಗೆಯೇ ಇಂದು ಕೂಡ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ಮೌನಕ್ಕೆ ಶರಣಾಗಿದ್ದಾರೆ.

hdk cm

ಸಿಎಂ ಹೇಳಿದ್ದೇನು?
ಈ ಹಿಂದೆ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಂಡ್ಯ ಕ್ಷೇತ್ರ ಹಾಗೂ ಅಲ್ಲಿನ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲಿ ಬರೀ ಸುಮಲತಾ, ಮೋದಿ ಎಂದು ತೋರಿಸುತ್ತಿದ್ದೀರಾ. ನಿಮಗೆ ನಾನು ಈಗ ಉತ್ತರ ನೀಡಲ್ಲ. ಮೇ 23ಕ್ಕೆ ಉತ್ತರ ನೀಡುತ್ತೇನೆ. ಮಂಡ್ಯ ರಾಜಕಾರಣ, ಅಲ್ಲಿನ ಜನ ಏನು ಎಂದು ನನಗೆ ಗೊತ್ತು. ನೋಡುತ್ತಿರಿ ಮೇ 23ಕ್ಕೆ ಜನ ಏನು ಎಂದು ತೋರಿಸುತ್ತಾರೆ. ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲಾ ಮಾಧ್ಯಮಗಳಲ್ಲೂ ಬರೀ ಸುಮಲತಾ, ಸುಮಲತಾ ಎಂದು ಹೇಳಿದ್ದೀರಾ. ಇದಕ್ಕೆಲ್ಲಾ ಮೇ 23ರ ನಂತರ ಉತ್ತರ ಸಿಗುತ್ತೆ. ಆಗ ಮಾತನಾಡುತ್ತೇನೆ ಎಂದು ಕಿಡಿಕಾರಿದ್ದರು.

cm hdk nikil 1

ಬಳಿಕ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಮಂಡ್ಯ ಚುನಾವಣೆ ಬಗ್ಗೆ ಕೇಳಲಾದ ಮಾಧ್ಯಮಗಳ ಪ್ರಶ್ನೆಗೆ ಸಿಎಂ ಸಿಟ್ಟಿಗೆದ್ದಿದ್ದರು. ನಾನು ಮಾಧ್ಯಮದವರ ಜೊತೆ ಉತ್ತಮ ಸ್ನೇಹ ಇಟ್ಟುಕೊಂಡ ವ್ಯಕ್ತಿ. ಕೆಲ ದಿನಗಳ ಹಿಂದೆ ಮಾಧ್ಯಮದವರ ಸಹವಾಸವೇ ಡೇಂಜರ್ ಅಂತಾ ದೂರ ಉಳಿದುಕೊಂಡಿದ್ದೇನೆ. ನಾನು ಮಾಧ್ಯಮದಿಂದ ಬದುಕಿಲ್ಲ. ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದದಿಂದ ಬದುಕಿದ್ದೇನೆ. ಮಾತು ಎತ್ತಿದರೆ ಸಿಎಂ ಕುರ್ಚಿ ಗಢ ಗಢ ಅಂತಾ ಶುರು ಮಾಡಿಕೊಳ್ಳುತ್ತಾರೆ. ಕೆಲವು ದೃಶ್ಯ ಮಾಧ್ಯಮಗಳು ತಮ್ಮ ಟೈಮ್ ಫಿಲ್ ಮಾಡಿಕೊಳ್ಳೋಕೆ ನಾವು ಹೇಳಿರದ ವಿಷಯಗಳನ್ನು ಅರ್ಧ ಗಂಟೆ ಎಪಿಸೋಡ್ ಮಾಡ್ತಾರೆ. ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬ ವಿಷಯದ ಬಗ್ಗೆ ಅರ್ಧ ಗಂಟೆ ಸಂಚಿಕೆ ಮಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದರು.

CM HDK

ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾನೂನು ತರಲು ಚರ್ಚೆ ನಡೆಸಿದ್ದೇವೆ. ಕೆಲವೊಂದು ವಾಹಿನಿಗಳು ರಾಜಕಾರಣಿಗಳನ್ನು ವ್ಯಂಗ್ಯವಾಗಿ ತೋರಿಸುತ್ತಾರೆ. ನಾವೇನು ಬಿಟ್ಟಿ ಸಿಕ್ಕಿದ್ದೇವಾ? ನಮ್ಮ ಪ್ರತಿಯೊಂದು ಹೇಳಿಕೆಗಳನ್ನು ವ್ಯಂಗ್ಯವಾಗಿ ತೋರಿಸುವ ಅಧಿಕಾರವನ್ನು ಮಾಧ್ಯಮಗಳಿಗೆ ಯಾರು ನೀಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಈ ಸಮ್ಮಿಶ್ರ ಸರ್ಕಾರ ಸದೃಢವಾಗಿದ್ದು, ಅಷ್ಟೊಂದು ಸುಲಭವಾಗಿ ಹೋಗಲ್ಲ ಎಂದು ಗುಡುಗಿದ್ದರು.

hdk e1554977447812

ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆಗಿನ ಸಭೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ, ನಿಮ್ಮಲ್ಲಿನ ಚರ್ಚೆ ಹಾಗೂ ಸುದ್ದಿಗಳಿಂದ ನಾನು ನಿಮಗೆ ಬಹಿಷ್ಕಾರ ಹಾಕಿದ್ದೇನೆ. ನಾನು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿದ್ದೇನೆ (ಐ ಆಮ್ ಬಾಯ್ಕಾಟಿಂಗ್ ಯುವರ್ ಸೆಲ್ಫ್) ಎಂದು ಹೇಳಿ ಸಿಟ್ಟಿನಿಂದಲೇ ತೆರಳಿದ್ದರು.

Sumalatha Ambareesh HDK

ಅದೇನು ಸ್ಟೋರಿನೋ, ಅದೇನು ಚರ್ಚೆ ಮಾಡುತ್ತೀರೋ ಮಾಡಿಕೊಳ್ಳಿ. ಆ ಮೂಲಕ ಮಜಾ ಮಾಡಿ. ನಾನು ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದರು.

ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *