– ನಾಪತ್ತೆಯಾದ ಮೀನುಗಾರರ ಕುಟುಂಬಸ್ಥರಿಗೆ 1 ಲಕ್ಷ ರೂ. ಪರಿಹಾರ ಘೋಷಣೆ
ಬೆಂಗಳೂರು: ಬಿಜೆಪಿಯವರು ಸಂಕ್ರಾಂತಿಗೆ ಒಂದು ಡೆಡ್ ಲೈನ್ ಕೊಟ್ಟಿದ್ದಾರೆ. ಆಮೇಲೆ ಶಿವರಾತ್ರಿಗೆ ಒಂದು, ಯುಗಾದಿಗೆ ಮತ್ತೊಂದು ಡೆಡ್ ಲೈನ್ ಕೊಡುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಸಿಎಂ, 12 ಜನ ಶಾಸಕರು ಬಿಜೆಪಿ ಸೇರಿ, ಸಂಕ್ರಾಂತಿ ಬಳಿಕ ರಾಜೀನಾಮೆ ನೀಡುತ್ತಾರೆ ಎನ್ನುವುದು ಸುಳ್ಳು. ಸಂಕ್ರಾಂತಿಯಾದ ಮೇಲೂ ಸರ್ಕಾರಕ್ಕೆ ಏನು ಆಗುವುದಿಲ್ಲ. ಟೆಕ್ನಿಕಲ್ ಸಮಸ್ಯೆಯಿಂದಾಗಿ 5 ನಿಗಮ-ಮಂಡಳಿ ನೇಮಕಕ್ಕೆ ತಡೆಹಿಡಿಯಲಾಗಿದೆ. ಯಾರ ಮೇಲೋ ಅಗೌರವ ತೋರಿಸಲು ತಡೆ ಹಿಡಿದಿಲ್ಲ. ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಎರಡನೇ ಲಿಸ್ಟ್ನಲ್ಲೂ ಶಾಸಕ ಸುಧಾಕರ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಡೌಟ್
Advertisement
Advertisement
ಕರಾವಳಿ ಭಾಗದ ಮೀನುಗಾರರು ನಾಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಕಾಣೆಯಾಗಿರುವ ಮೀನುಗಾರ ಕುಟುಂಬಕ್ಕೆ ತಕ್ಷಣಕ್ಕೆ 1 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದೇನೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ನಾಪತ್ತೆಯಾದ ಮೀನುಗಾರರನ್ನು ಹುಡುಕಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಕೇಂದ್ರ ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರ ಇಲಾಖೆಯ ಜೊತೆ ಮಾತನಾಡಿದ್ದೇನೆ. ನಮ್ಮ ಅಧಿಕಾರಿಗಳು, ಗೃಹ ಸಚಿವರಿಗೂ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
Advertisement
ಕೋಸ್ಟಲ್ ಭಾಗದ ಅಧಿಕಾರಿಗಳು ನಮಗೆ ಉತ್ತಮ ಸಹಕಾರ ನೀಡಿದ್ದಾರೆ. ಕಾಣೆಯಾದವರ ಕುಟುಂಬ ಆತಂಕವಾಗುವುದು ಬೇಡ. ನಾಪತ್ತೆಯಾದವರ ಬಗ್ಗೆ ಮಾಹಿತಿ ಸಿಗುವವರೆಗೂ ಹುಡುಕಲು ಆದೇಶ ನೀಡಿದ್ದೇನೆ. ಮೀನುಗಾರಿಕೆ ಸಚಿವರನ್ನು ಈಗಾಗಲೇ ಉಡುಪಿಗೆ ಕಳುಹಿಸಿದ್ದೇನೆ. ಸರ್ಕಾರ ಪ್ರಕರಣದಲ್ಲಿ ನಿರ್ಲಕ್ಷ್ಯವಹಿಸಿಲ್ಲ. ಮೀನುಗಾರರ ಕುಟುಂಬದ ಜೊತೆ ಸರ್ಕಾರ ಇದೆ ಎಂದು ಹೇಳಿದರು.
Advertisement
ಕಾಣೆಯಾದ ಬಗ್ಗೆ ಮಾಹಿತಿ ಪಡೆಯಲು ನಮ್ಮಿಂದ ಸಾಧ್ಯವಾಗಿಲ್ಲ. ಮುಂಬೈ ಕೋಸ್ಟಲ್ ಭಾಗದ ಸಮುದ್ರಕಳ್ಳರು ಕಿಡ್ನಾಪ್ ಮಾಡಿರುವ ವಿಚಾರವೂ ಇದೆ. ಆದರೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೂ ಪತ್ರಬರೆದಿದ್ದೇನೆ. ಕಾಣೆಯಾದವರು ಪತ್ತೆ ಆಗೋವರೆಗೂ ಹುಡುಕಾಟ ನಡೆಸುತ್ತೇವೆ ಅಂತ ಅಭಯ ನೀಡಿದರು.
ಭತ್ತ ಖರೀದಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬದಲಿಸಿದೆ. ಇದರನ್ವಯ ರೈತರು ನೇರವಾಗಿ ಮಿಲ್ ಮಾಲೀಕರಿಗೆ ಭತ್ತ ನೀಡಬೇಕು. ಮಿಲ್‍ಗಳು ಭತ್ತದಿಂದ ಅಕ್ಕಿ ತಯಾರಿಸಿ, ಆಹಾರ ನಿಗಮದ ಮೂಲಕ ಅಕ್ಕಿ ಪೂರೈಸುತ್ತವೆ. ಆದರೆ ಈ ವಿಧಾನದಲ್ಲಿ ದಾಸ್ತಾನು ಮಾಡುವ ರೈತರ ಭತ್ತಕ್ಕೆ ಭದ್ರತೆಯಾಗಿ ಮಿಲ್ ಮಾಲೀಕರು ಠೇವಣಿ ಇಡಬೇಕು. ಹೀಗಾಗಿ ರೈಸ್ ಮಿಲ್‍ಗಳ ಭದ್ರತಾ ಠೇವಣಿಗೆ ಪರ್ಯಾಯ ಉಪಾಯ ಅನುಸರಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಭಾರತ್ ಬಂದ್ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಮಾಡುತ್ತಿದ್ದಂತೆ ಪ್ರತಿಕ್ರಿಯೆ ನೀಡಲು ಸಿಎಂ ಕುಮಾರಸ್ವಾಮಿ ನಿರಾಕರಿಸಿದರು. ಬಂದ್ ಬಗ್ಗೆ ನಾನು ಮಾತಾಡೊಲ್ಲ ಅಂತ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv