ಬೆಂಗಳೂರು: ಜೆಡಿಎಸ್ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ಮಾತನಾಡುತ್ತಾ ಕಣ್ಣೀರು ಸುರಿಸಿದ್ದಾರೆ.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಪಕ್ಷದ ಕಾರ್ಯಕರ್ತರು ಹಾಗೂ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಇಂದು ಸಮ್ಮಿಶ್ರ ಸರ್ಕಾರದ ಜವಾಬ್ದಾರಿ ಹೊತ್ತಿದ್ದೇನೆ. ಇದರಿಂದಾಗಿ ನಿಮ್ಮೆಲ್ಲರನ್ನ ಕೂತು ಮಾತಾಡಿಸಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ನಾನು ಸಿಎಂ ಆಗಿರೋದಕ್ಕೆ ನೀವೆಲ್ಲಾ ಸಂಭ್ರಮಿಸುತ್ತಿದ್ದೀರಾ. ನಮ್ಮ ಅಣ್ಣನೋ, ತಮ್ಮನೋ ಸಿಎಂ ಆಗಿದ್ದಾರೆ ಎಂದು ಸಂತೋಷ ಪಟ್ಟಿದ್ದೀರಾ. ಆದರೆ ನನಗೆ ಸಂತೋಷವಿಲ್ಲ. ನಾನೇ ಎಲ್ಲಾ ನೋವನ್ನು ವಿಷಕಂಠನಾಗಿ ನುಂಗಿ ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿ ಕಣ್ಣಿರು ಹಾಕಿದರು.
Advertisement
ನಾಡಿನ ಸಮಸ್ಯೆಗಾಗಿ, ಜನರಿಗಾಗಿ ನಾನು ಸಿಎಂ ಆಗಬೇಕು ಅನ್ನೋ ಆಸೆಯಿತ್ತು. ಆದರೆ ನಾಡಿನ ಜನ ನನಗೆ ಆಶೀರ್ವಾದ ನೀಡಿಲ್ಲ. ಚುನಾವಣೆ ಸಮಯದಲ್ಲಿ ಸಾವಿರಾರು ಜನ ಸೇರುತ್ತಿದ್ದರು, ಆದರೆ ನನ್ನ ಅಭ್ಯರ್ಥಿಗೆ ಮತ ಹಾಕಿಲ್ಲ. ಎರಡನೇ ಬಾರಿ ಶಸ್ತ್ರ ಚಿಕಿತ್ಸೆಯಾದ ಬಳಿಕ ಹಗಲು ರಾತ್ರಿ ಪಕ್ಷಕ್ಕೋಸ್ಕರ ಕಷ್ಟ ಪಟ್ಟೆ. ಆರೋಗ್ಯ ಲೆಕ್ಕಿಸದೇ ರಾಜ್ಯ ಸುತ್ತಿದ್ದೇನೆ. ಈ ದೇಹಕ್ಕೆ ವಿರಾಮ ಕೊಡೋದಕ್ಕೆ ಆಗಿಲ್ಲ. ಪಕ್ಷಕ್ಕೆ ಬಹುಮತ ಬರದೇ ಇದ್ದರೂ ತಂದೆ-ತಾಯಿ, ದೇವರ ಮೇಲಿನ ಭಕ್ತಿಯಿಂದಾಗಿ ಸಿಎಂ ಆಗಿದ್ದೇನೆ. ಕಾಂಗ್ರೆಸ್ ಬೆಂಬಲದೊಂದಿಗೆ ಇವತ್ತು ಸಿಎಂ ಆಗಿದ್ದೇನೆ ಎಂದು ತಿಳಿಸಿದರು.
Advertisement
Advertisement
12 ವರ್ಷಗಳ ಹಿಂದೆ ನಾನು ಸಿಎಂ ಆಗಿದ್ದಾಗ ಯಾವ ಮಾಧ್ಯಮಗಳು ವಿರೋಧ ಮಾಡಿಲ್ಲ. ಅಂದು ನಾನು ನಮ್ಮ ತಂದೆಯ ವಿರುದ್ಧವೇ ಹೋಗಿದ್ದೆ. ಇಂದು ಯಾವ ಕಾರಣಕ್ಕೆ ನೀವು ಜನರನ್ನು ನನ್ನ ವಿರುದ್ಧ ಎತ್ತಿಕಟ್ಟುತ್ತಿದ್ದೀರಿ, ಮಾಧ್ಯಮದವರಿಗೆ ಕಾರ್ಯಕ್ರಮ ನೀಡಿಲ್ಲವೆಂದು ನನ್ನ ಬಗ್ಗೆ ವರದಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
Advertisement
ಪೆಟ್ರೋಲ್ ದರ ಏರಿಕೆ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕೇವಲ ಒಂದು ರೂಪಾಯಿ ಹೆಚ್ಚಿಸಿದ್ದಕ್ಕೆ ಮಂಗಳೂರಿನ ಮೀನುಗಾರ ಮಹಿಳೆಯರ ಬಳಿ ಕುಮಾರಸ್ವಾಮಿ ಈಸ್ ನಾಟ್ ಅವರ್ ಸಿಎಂ ಎಂದು ಹೇಳಿಸುತ್ತಿದ್ದೀರಿ. ನನ್ನ ಮೇಲೆ ನಿಮಗೇಕಿಷ್ಟು ಕೋಪ. ಪ್ರಧಾನಿ ನರೇಂದ್ರ ಮೋದಿಯವರು ಹನ್ನೊಂದು ಬಾರಿ ಇಂಧನದ ಬೆಲೆ ಏರಿಕೆ ಮಾಡಿದ್ದರು. ಅವರ ವಿರುದ್ಧ ನೀವು ಸಣ್ಣ ಚಕಾರ ಕೂಡ ಎತ್ತಿಲ್ಲ. ಎಷ್ಟು ದಿನ ಅಂತಾ ನೀವು ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತೀರಿ ಎಂದು ಪ್ರಶ್ನಿಸಿದರು.
ನನಗೆ ಸ್ವಲ್ಪ ಸಮಯ ಕೊಡಿ, ನಾನು ಸಿಎಂ ಆಗಿ ಕೇವಲ ಎರಡು ತಿಂಗಳು ಆಗಿದೆ. ನಾನು ಯಾರಿಗೂ ಮೋಸ ಮಾಡಲು ಸಿಎಂ ಆಗಿಲ್ಲ. ನಾನು ಸಿಎಂ ಆಗಿರುವವರೆಗೂ ಬಡವರ ಪರ ಇರುತ್ತೇನೆ. ನಾನು ಕೇವಲ ರಾಮನಗರದ ಸಿಎಂ ಅಲ್ಲ, ಇಡೀ ರಾಜ್ಯದ ಸಿಎಂ. ಎಲ್ಲಾ ಜಿಲ್ಲೆಗಳು ನನ್ನ ಜಿಲ್ಲೆಯೇ ಆಗಿದೆ. ಟೀಕೆ ಮಾಡೋದನ್ನು ನಿಲ್ಲಿಸಿ, ಸ್ವಲ್ಪ ಸಮಯ ನೀಡಿ ಎಂದು ಕೇಳಿಕೊಂಡರು.