Connect with us

Belgaum

ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ – ಯೂಟರ್ನ್ ಹೊಡೆದ ಸಿಎಂ ಕುಮಾರಸ್ವಾಮಿ

Published

on

ಬೆಳಗಾವಿ: ಮುಂದಿನ ವರ್ಷ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಧಿವೇಶನದ ಕಲಾಪಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಸಾಲಮನ್ನಾ ಮಾಡುವುದಕ್ಕೆ ಮುಂದಿನ ವರ್ಷದ ಬಜೆಟ್‍ನಲ್ಲಿ ಹಣವನ್ನು ಮೀಸಲಿಡಲಾಗಿದೆ. ಬಿಜೆಪಿಯವರು ಆರು ತಿಂಗಳು ಕಾದು ನೋಡಲಿ. ನಾನು ಎಲ್ಲಿಯೂ ಹೋಗುವುದಿಲ್ಲ. ಈಗಲೇ ಎಲ್ಲ ಹಣವನ್ನು ಪಾವತಿ ಮಾಡಲು ಸಿದ್ಧನಿರುವೆ. ಒಂದು ವೇಳೆ ನಾಲ್ಕು ಹಂತದಲ್ಲಿ ಹಣ ಪಾವತಿಸುವ ಪರಿಸ್ಥಿತಿ ಬಂದಾಗ ಎದುರಿಸಬೇಕಾಗುತ್ತದೆ ಎಂದು ದ್ವಂದ್ವ ಹೇಳಿಕೆ ನೀಡಿದ್ದಾರೆ.

ರೈತರ ಸಾಲಮನ್ನಾಗೆ ನಾನು ಬದ್ಧನಿರುವೆ. ರೈತರ ಕೃಷಿ ಸಾಲಮನ್ನಾ ಹಣವನ್ನು ಬ್ಯಾಂಕ್‍ಗಳಿಗೆ ನಾಲ್ಕು ವರ್ಷದಲ್ಲಿ ಪಾವತಿಸಲಾಗುತ್ತದೆ. ಈ ಕುರಿತು ಮುಂದಿನ ವರ್ಷದ ಬಜೆಟ್‍ನಲ್ಲಿ ಸಂಪೂರ್ಣ ಮಾಹಿತಿ ನೀಡತ್ತೇನೆ. ಯಾವ ವರ್ಷ ಎಷ್ಟು ಹಣವನ್ನು ಬ್ಯಾಂಕಿಗೆ ನೀಡಬೇಕು ಎನ್ನುವ ವಿಚಾರವಾಗಿ ಆರ್ಥಿಕ ಇಲಾಖೆಯ ಜೊತೆಗೆ ಚರ್ಚೆ ಮಾಡಿದ್ದೇನೆ. ಈಗಾಗಲೇ ದೊಡ್ಡಬಳ್ಳಾಪುರ ರೈತರ ಸಾಲಮನ್ನಾ ಮಾಡಲಾಗಿದೆ ಎಂದರು.

ನೀರಾವರಿ ನಿಗಮಗಳ ಯೋಜನೆಗಳಿಗೆ ಬ್ರೇಕ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಾಲಮನ್ನಾಕ್ಕೆ ಹಣ ಹೊಂದಿಸಲು ಯಾವುದೇ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿದಿಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಸ್ಥಗಿತ ಮಾಡಿಲ್ಲ. ಇದಕ್ಕೂ ಸಾಲಮನ್ನಾಕ್ಕೂ ಯಾವುದೇ ಸಂಬಂಧವಿಲ್ಲ. ಸಾಲಮನ್ನಾ ಮಾಡಲು ಪ್ರತ್ಯೇಕ ಹಣ ಮೀಸಲಿರಿಸಿದ್ದೇವೆ. ನೀರಾವರಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಕಲಾಪ ಕದನ:
ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ನಾನು ನಿನ್ನೆ ಹಗುರವಾಗಿ ಮಾತಾಡಿದ್ದೇನೆ ಎನ್ನುವುದು ಬಿಜೆಪಿಯವರ ಆರೋಪ. ಆದರೆ ಸರ್ಕಾರದ ಬಗ್ಗೆ ಇಷ್ಟು ದಿನ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಹಗುರವಾಗಿ ಮಾತಾಡಿದ್ದಾರೆ. ಈ ವರ್ತನೆಯಿಂದ ಬೇಸತ್ತ ನಾವು ಬಿಜೆಪಿ ವಿರುದ್ಧ ಧರಣಿ ಮಾಡಬೇಕಿತ್ತು. ಕಲಾಪದಲ್ಲಿ ನಿನ್ನೆ ಮಧ್ಯಾಹ್ನ ಸಾಲಮನ್ನಾ ಕುರಿತು ಮಾಹಿತಿ ನೀಡುತ್ತಿದ್ದೆ. ಅದನ್ನು ಕೇಳುವ ಮನಸ್ಥಿತಿ ಬಿಜೆಪಿಯವರಿಗೆ ಇರಲಿಲ್ಲ ಎಂದರು.

ಈ ಹಿಂದೆ ಸಿಎಂ ಹೇಳಿದ್ದೇನು?:
ವಿಧಾನಸೌಧದಲ್ಲಿ ಇದೇ ತಿಂಗಳ 4ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು 50 ಸಾವಿರ ರೂ. ಮನ್ನಾ ಮಾಡಲಾಗುವುದು. ಸಾಲಮನ್ನಾಕ್ಕಾಗಿ 6,500 ಕೋಟಿ ರೂ. ಮೀಸಲಿಟ್ಟಿದ್ದೇವೆ. ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ 17 ಲಕ್ಷ ರೈತರ ಸಾಲ ಪಡೆದಿದ್ದು, ಪ್ರತಿಯೊಬ್ಬರ ಖಾತೆಯ 50 ಸಾವಿರ ರೂ. ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದ್ದರು.

ಅಕ್ಟೋಬರ್ 24 ರಂದು ಸಿಎಂ, ಸಹಕಾರಿ ಬ್ಯಾಂಕ್‍ಗಳಿಗೆ ಕಳೆದ ತಿಂಗಳು 1,300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸಾಲಮನ್ನಾ ಪ್ರಕ್ರಿಯೆ ಡಿಸೆಂಬರ್ 8ರಿಂದ ಆರಂಭವಾಗಲಿದ್ದು, ಉಳಿದ 1,200 ಕೋಟಿ ರೂ.ವನ್ನು ಇದೇ ತಿಂಗಳು ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನು ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!

ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ 2ಲಕ್ಷ ರೂ.ವರೆಗಿನ ಎನ್‍ಪಿಎ ಸಾಲ, ಸುಸ್ತಿ ಸಾಲ ಮತ್ತು ಮರು ಹೊಂದಾಣಿಕೆ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡುವ ಕುರಿತು ಸಂಪುಟ ತೀರ್ಮಾನ ಕೈಗೊಂಡು ಈ ಆದೇಶ ಹೊರಡಿಸಿತ್ತು. ಇದನ್ನು ಓದಿ: ಸಾಲಮನ್ನಾ ನಂತರವೂ ರಾಜ್ಯ ಸರ್ಕಾರದ ಖಾತೆಯಲ್ಲಿ 10 ಸಾವಿರ ಕೋಟಿ ರೂಪಾಯಿ ಇದೆ: ಸಿಎಂ

ಸಾಲಮನ್ನಾ ಯೋಜನೆಯ ಪ್ರಕ್ರಿಯೆಗಳನ್ನು ಮುಂದುವರಿಸಲು ಇಬ್ಬರು ಐಎಎಸ್ ಅಧಿಕಾರಿಗಳನ್ನೊಳಗೊಂಡ ನೋಡಲ್ ಸಮಿತಿಯನ್ನೂ ಸರ್ಕಾರ ರಚಿಸಿದೆ. ಈ ಸಮಿತಿ ಬ್ಯಾಂಕ್‍ಗಳೊಂದಿಗೆ ಸಂಪರ್ಕ ಹೊಂದಿ ಸಾಲಮನ್ನಾದ ಅನುಕೂಲ ನೇರವಾಗಿ ರೈತರಿಗೆ ತಲುಪುವಂತೆ ಮಾಡಲಿದೆ. ಇದರ ಜತೆಗೆ ಚಾಲ್ತಿ ಸಾಲದ ಪೈಕಿ 25 ಸಾವಿರ ರೂ. ಮನ್ನಾ ಮಾಡಲಾಗುತ್ತದೆ. ಈ ಮೊತ್ತವನ್ನು ರೈತರ ಸಾಲದ ಖಾತೆಗೆ ಸರ್ಕಾರ ಜಮಾ ಮಾಡಲಿದೆ ಎಂದು ಕುಮಾರಸ್ವಾಮಿ ಹಿಂದೆ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *