-ಮುಂದಿನ ವಾರ ನಿಖಿಲ್ ಶಿಫ್ಟ್
ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಜೆಪಿ ನಗರದ ಮಿನಿ ಫಾರೆಸ್ಟ್ ಬಳಿ ಇರುವ ತಮ್ಮ ಅದೃಷ್ಟದ ಮನೆಗೆ ವಾಪಸ್ ಆಗಿದ್ದಾರೆ. ತಂದೆಯ ಜೊತೆಗೆ ಪ್ಯಾಲೇಸ್ ರೋಡ್ ಗೆಸ್ಟ್ ಹೌಸ್‍ನಲ್ಲಿದ್ದ ನಿಖಿಲ್ ಕೂಡ ವಾಪಸ್ ಹೋಗಲಿದ್ದಾರೆ.
ಮುಂದಿನ ಸೋಮವಾರದಿಂದ ಜೆ.ಪಿ. ನಗರ ನಿವಾಸಕ್ಕೆ ಸಿಎಂ ಕುಮಾರಸ್ವಾಮಿ ಶಿಫ್ಟ್ ಆಗಲಿದ್ದಾರೆ. ಸಾ.ರಾ. ಮಹೇಶ್ ಇದ್ದ ಸರ್ಕಾರಿ ನಿವಾಸ ಆಡಳಿತ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಜೆ.ಪಿ. ನಗರ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ ಸಾರ್ವಜನಿಕ ಅಹವಾಲು ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಶೃಂಗೇರಿ ಶ್ರೀಗಳ ಸಲಹೆ ಮೇರೆಗೆ ತಾಜ್ ವೆಸ್ಟೆಂಡ್‍ನಿಂದ ಸಿಎಂ ಕುಮಾರಸ್ವಾಮಿ ಶಿಫ್ಟ್ ಆಗುತ್ತಿದ್ದಾರೆ. ಅದೃಷ್ಟದ ಮನೆಗೆ ವಾಪಸ್ಸಾಗುವಂತೆ ಶ್ರೀಗಳು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಶೃಂಗೇರಿ ಶ್ರೀಗಳ ಸೂಚನೆ ಮೇರೆಗೆ ಮನೆ ಸಿಎಂ ಕುಮಾರಸ್ವಾಮಿ ಬದಲಿಸುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
Advertisement
ಅದೃಷ್ಟ ಮನೆ:
ಬೆಂಗಳೂರಿನ ಜೆಪಿ ನಗರದ ಮಿನಿ ಫಾರೆಸ್ಟ್ ಬಳಿ ಇರುವ ಸಿಎಂ ಕುಮಾರಸ್ವಾಮಿಯವರ ಮನೆ ಅವರ ಪಾಲಿಗೆ ಅದೃಷ್ಟದ ಮನೆ ಎಂಬುದು ಅವರ ಕುಟುಂಬದ ನಂಬಿಕೆಯಾಗಿದೆ. 2006 ರಲ್ಲಿ ಎಚ್‍ಡಿಕೆ ಸಿಎಂ ಆಗುವ ಮುನ್ನ ಇದೇ ಮನೆಯಲ್ಲಿ ವಾಸವಾಗಿದ್ದರು. ನಂತರ ಮನೆ ಮಾರಬೇಕೆಂಬ ಉದ್ದೇಶದಿಂದ ಲ್ಯಾವೆಲ್ಲೆ ರಸ್ತೆಯ ಫ್ಲ್ಯಾಟ್ ನಲ್ಲಿ ಕುಮಾರಸ್ವಾಮಿ ಕುಟುಂಬ ವಾಸ ಆರಂಭಿಸಿತ್ತು. ಲ್ಯಾವೆಲ್ಲೆ ರಸ್ತೆಯ ಫ್ಲ್ಯಾಟ್ ಎಚ್‍ಡಿಕೆ ಕುಟುಂಬಕ್ಕೆ ಅಷ್ಟಾಗಿ ಅದೃಷ್ಟ ತರಲಿಲ್ಲ. ಈ ನಡುವೆ ಜೆಪಿ ನಾಗರದ ಮನೆಯ ಬಳಿ ಕಪ್ಪುನಾಗರ ಕಾಣಿಸಿಕೊಂಡಿದ್ದರಿಂದ ಜ್ಯೋತಿಷಿಗಳ ಸಲಹೆ ಮೇರೆಗೆ ಎಚ್‍ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಜೆಪಿ ನಗರದ ಮನೆ ನವೀಕರಿಸಿ ಮತ್ತೆ ಅಲ್ಲೇ ಗೃಹಪ್ರವೇಶ ನೆರವೇರಿಸಿ ವಾಸ ಆರಂಭಿಸಿದ್ದರು.
Advertisement
ವೆಸ್ಟೆಂಡ್ ವಾಸ:
ಜೆಪಿ ನಗರ ಮನೆ ವಾಸ ಆರಂಭಿಸಿದ ಕೆಲವೇ ತಿಂಗಳಲ್ಲಿ ಎಚ್‍ಡಿಕೆ 37 ಸೀಟ್ ಗೆದ್ದರೂ ಯಾರೂ ಊಹಿಸಿದ ರೀತಿಯಲ್ಲಿ ಅದೃಷ್ಟದ ಬೆನ್ನೇರಿ ಮುಖ್ಯಮಂತ್ರಿಯಾದರು. ಸಿಎಂ ಆದ ನಂತರ ಅದೃಷ್ಟದ ಮನೆ ಮರೆತು ಕುಮಾರಸ್ವಾಮಿ ಅವರು ವೆಸ್ಟೆಂಡ್ ವಾಸ ಆರಂಭಿಸಿದ್ದರು. ಜೊತೆಗೆ ಸಿಎಂ ಪುತ್ರ ನಿಖಿಲ್ ಕೂಡ ಜೆಪಿ ನಗರದ ಅದೃಷ್ಟದ ಮನೆ ಬಿಟ್ಟು ಗೆಸ್ಟ್ ಹೌಸ್ ವಾಸ ಆರಂಭಿಸಿದ್ದರು.
ಇದರಿಂದ ಒಂದಾದ ನಂತರ ಒಂದರಂತೆ ‘ಜಾಗ್ವಾರ್’, ‘ಸೀತಾರಾಮ ಕಲ್ಯಾಣ’ ಚಿತ್ರಗಳು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಇತ್ತ ಮೈತ್ರಿ ಸರ್ಕಾರದಲ್ಲಿ ಸುಸೂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗದೆ, ಬಂಡಾಯ, ಅಸಮಾಧಾನಗಳಿಂದ ಖುದ್ದು ಎಚ್‍ಡಿಕೆ ಮಾನಸಿಕವಾಗಿ ಸಾಕಷ್ಟು ಉದ್ವೇಗಕ್ಕೆ ಒಳಗಾಗಿದ್ದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೇ ಸಿಎಂ ಎಚ್‍ಡಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದರು. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಸೋಲಿನಿಂದ ಗೌರವಕ್ಕೆ ಧಕ್ಕೆ ತಂದುಕೊಂಡರು, ಮಂಡ್ಯದ ಸೋಲಿನಿಂದ ಎಚ್‍ಡಿಕೆ ಪ್ರತಿಷ್ಠೆಗೂ ಬಲವಾದ ಹೊಡೆತ ಬಿತ್ತು.
ಈ ಎಲ್ಲಾ ಹಿನ್ನೆಲೆಗೆ ಅದೃಷ್ಟದ ಮನೆ ಜೆಪಿ ನಗರದಿಂದ ಹೊರಗಿದ್ದಿದ್ದೇ ಕಾರಣ ಎಂದು ಶೃಂಗೇರಿ ಮಠದ ಶ್ರೀಗಳು ಹೇಳಿದ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ದೇವೇಗೌಡರು ಖುದ್ದು ಕುಮಾರಸ್ವಾಮಿಯವರಿಗೆ ಹಾಗೂ ನಿಖಿಲ್‍ಗೆ ಜೆಪಿನಗರದ ಮನೆಯಲ್ಲಿಯೇ ವಾಸ್ತವ್ಯ ಆರಂಭಿಸುವಂತೆ ತಾಕೀತು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿಎಂ ವೆಸ್ಟೆಂಡ್ ವಾಸ್ತವ್ಯ ಬಿಟ್ಟು ಜೆಪಿ ನಗರ ವಾಸ್ತವ್ಯ ಆರಂಭಿಸಿದ್ದಾರೆ. ಮತ್ತೆ ಜೆಪಿ ನಗರ ಮನೆ ಪ್ರವೇಶ ಆರಂಭ ಮಾಡಿದಾಗಿನಿಂದ ಸರ್ಕಾರಕ್ಕಿದ್ದ ಅಭದ್ರತೆ ಕ್ರಮೇಣ ದೂರವಾಗುತ್ತಿದೆ. ಈ ನಡುವೆ ಮಂಡ್ಯ ಸೋಲಿನಿಂದ ನಿಖಿಲ್ ಕೂಡ ಜೆಪಿ ನಗರ ಮನೆಗೆ ತಮ್ಮ ವಾಸ್ತವ್ಯವನ್ನ ಜೂನ್ ಮೊದಲ ವಾರದಿಂದ ಶುರು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜೆಪಿ ನಗರದ ಮನೆಯಲ್ಲಿದ್ದುಕೊಂಡೆ ತಂದೆ ಮತ್ತು ತಾಯಿ ಅನಿತಾ ಕುಮಾರಸ್ವಾಮಿಯವರ ಜವಾಬ್ದಾರಿಯನ್ನ ಹೊರಲು ನಿಖಿಲ್ ಸಿದ್ಧಗೊಂಡಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 10.30 ರಿಂದ ಮಧ್ಯಾಹ್ನದ ವರೆಗೂ ನಿಖಿಲ್ ಮನೆ ಬಳಿ ಬರುವ ಕಾರ್ಯಕರ್ತರು ಮತ್ತು ಜನರ ಜೊತೆ ಇರಲಿದ್ದಾರೆ. ಈಗಾಗಲೇ ನಿಖಿಲ್ ಖುಷ್ವಂತ್ ಎಂಬ ಎಂ.ಬಿ.ಎ ಪದವೀದರ ಯುವಕನನ್ನ ತನ್ನ ಆಪ್ತ ಸಹಾಯಕನಾಗಿ ನೇಮಿಸಿಕೊಂಡಿದ್ದಾರೆ. ಸಿನೆಮಾ ಮತ್ತು ವಾಹಿನಿಯ ಉಸ್ತುವಾರಿಯ ಕಡೆಗೂ ನಿಖಿಲ್ ಹೆಚ್ವಿನ ಗಮನ ಹರಿಸಲು ನಿಖಿಲ್ ಸರ್ವ ಸನ್ನದ್ಧರಾಗಿದ್ದಾರೆ.