ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಧರ್ಮಸ್ಥಳದ ಮಂಜುನಾಥನೇ ಬುದ್ಧಿ ಕೊಟ್ಟಿರಬಹುದು. ಆದ್ದರಿಂದ ಅವರು ತಮ್ಮ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ದಿನ ಯಡಿಯೂರಪ್ಪ ಅವರು ಮಿಮಿಕ್ರಿ ಮಾಡಿಸಿದ್ದಾರೆ ಎಂದರು. ಆದರೆ ಇಂದು ಅವರೇ ತಪ್ಪೊಪ್ಪಿಕೊಂಡಿದ್ದಾರೆ. ಬಹುಶಃ ಧರ್ಮಸ್ಥಳದ ಮಂಜುನಾಥನೇ ಒಪ್ಪಿಕೊಳ್ಳಲು ಯಡಿಯೂರಪ್ಪ ಅವರಿಗೆ ಬುದ್ಧಿ ಕೊಟ್ಟಿರಬಹುದು. ಮುಂದೆ ಏನೇನು ಆಗುತ್ತದೋ ಗೊತ್ತಿಲ್ಲ ಎಂದು ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಶಾಸಕನ ಮಗನನ್ನು ಕಳಿಸಿಕೊಟ್ಟು ಕುತಂತ್ರ- ತಪ್ಪೊಪ್ಪಿಕೊಂಡ್ರು ಬಿಎಸ್‍ವೈ
Advertisement
Advertisement
ನಾಳೆ(ಸೋಮವಾರ) ಬಿಜೆಪಿ ಸಿಡಿ ಬಿಡುಗಡೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಹಳೆ ಸರಕು ಇಟ್ಟುಕೊಂಡು ಚರ್ಚೆಗೆ ಬರುತ್ತಾರಂತೆ, ಬರಲಿ ನಾನು ಚರ್ಚೆಗೆ ಸಿದ್ಧ. ನಾನು ದುಡ್ಡು ಕೇಳಿಲ್ಲ, ನನ್ನ ಬಳಿ ದುಡ್ಡು ಇಲ್ಲ, ನಮ್ಮ ಪಕ್ಷದ ಶಾಸಕರು ಸಾಲ-ಸೋಲಾ ಮಾಡಿ ಚುನಾವಣೆ ನಡೆಸಿದ್ದರು. ಅವೆಲ್ಲ ಪಕ್ಷದ ಒಳಗೆ ಆಗಿರುವ ಮಾತುಕತೆಗಳು. ನಾನು ಬೇರೆ ಪಕ್ಷದವರನ್ನು ಕರೆದು ಸ್ವೇಚಾಚ್ಛಾರವಾಗಿ ಕೋಟಿ ಕೋಟಿ ಹಣ ಕೊಡುತ್ತೀನಿ ಎಂದು ಮುಖ್ಯಮಂತ್ರಿಯಾಗಿ ಹೇಳಿದ್ದೀನಾ ಎಂದು ತಿರುಗೇಟು ನೀಡಿದ್ದಾರೆ.
Advertisement
ಅವರ ಬಳಿ ಹೆಚ್ಚು ಹಣ ಇದೆ. ನಾನು ಪ್ರಾದೇಶಿಕ ಪಕ್ಷ ನಡೆಸಬೇಕು. ನನ್ನ ಬಳಿ ದುಡ್ಡಿಲ್ಲ. ಅವರ-ಇವರ ಬಳಿ ಭಿಕ್ಷೆ ಬೇಡಿ ಪಕ್ಷ ನಡೆಸಬೇಕು. ಯಡಿಯೂರಪ್ಪ ಲೂಟಿ ಹೊಡೆದು ದುಡ್ಡು ಇಟ್ಟಿದ್ದಾರೆ, ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ.
Advertisement
ಯಡಿಯೂರಪ್ಪ ಆಡಿಯೋ ವಿಚಾರ ಮುಂದಿನ ಕ್ರಮದ ಬಗ್ಗೆ ಸ್ಪೀಕರ್ ನಿರ್ಧಾರ ಮಾಡುತ್ತಾರೆ. ಬಿಜೆಪಿ ಅವರು ತರುತ್ತಿರುವ ಆಡಿಯೋ ಬಗ್ಗೆ ನಾನು ಅವತ್ತೇ ಚರ್ಚೆ ಮಾಡೋಣ ಅಂತ ಹೇಳಿದ್ದೆ. ಆ ವಿಷಯ ಬಂದಾಗ ನಾನೇ ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಅಂತ ಹೇಳಿದ್ದೆ. ಈಗ ಮತ್ತೆ ಅದೇ ಹಳೆ ಸರಕು ತರುತ್ತಿದ್ದಾರೆ. ಚರ್ಚೆಗೆ ನಾನು ಸಿದ್ಧ ಎಂದು ಸವಾಲ್ ಹಾಕಿದ್ದಾರೆ.
ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಗೆ ನಾನು ದುಡ್ಡು ಕೊಡುತ್ತೀನಿ ಅಂತ ಕರೆದಿಲ್ಲ. ಮೊನ್ನೆ ಯಡಿಯೂರಪ್ಪ ಹೇಳಿದಂತೆ ಗುತ್ತೇದಾರ್ ಹೇಳುತ್ತಿದ್ದರು ಅಷ್ಟೆ. ಸುಭಾಷ್ ಗುತ್ತೇದಾರ್ ನನ್ನ ಬಳಿ ಅರ್ಜಿ ಕೊಡುವುದಕ್ಕೆ ಬಂದಿದ್ದರು. ಆಗ ನೀನು ನಮ್ಮ ಪಕ್ಷದಲ್ಲಿ ಇದ್ದು, ನಮ್ಮ ಜೊತೆ ಎಂಎಲ್‍ಎ ಆದವನು. ಯಾರೋ ಕರೆದರು ಅಂತ ಹೋಗಿ ಈಗ ಅರ್ಜಿ ಹಿಡಿದುಕೊಂಡು ಬಂದಿದ್ದೀಯಾ ಅಲ್ಲ. ನೀನೇ ಮಂತ್ರಿ ಆಗುವ ಅವಕಾಶ ಕಳೆದುಕೊಂಡೆ ಅಂತ ಹೇಳಿದ್ದೆ ಅಷ್ಟೆ. ಅದು ಪಕ್ಷಕ್ಕೆ ಕರೆದಂಗಾ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಬಳಿ ಬಂದ ಯಾವ ಬಿಜೆಪಿ ಶಾಸಕರಿಗೆ ನನ್ನ ಪಕ್ಷಕ್ಕೆ ಬಂದು ಸರ್ಕಾರ ಉಳಿಸಿ ಕೊಡಿಯೆಂದು ಯಾರಿಗೂ ಕೇಳಿಲ್ಲ. ನಾನು ನಿಮ್ಮ ರಾಜಕೀಯ ಜೀವನ ಹಾಳು ಮಾಡೊಲ್ಲವೆಂದು ಹೇಳಿ ಕಳಿಸಿದ್ದೀನಿ. ಅನೇಕ ಬಿಜೆಪಿ ಶಾಸಕರು ನನ್ನ ಸ್ನೇಹಿತರಾಗಿದ್ದಾರೆ. ನನ್ನ ಅಧಿಕಾರ ಉಳಿಸಿಕೊಳ್ಳಲು ನಾನು, ಬಿಜೆಪಿ ಶಾಸಕರ ಭವಿಷ್ಯಕ್ಕೆ ಕುಂದು ತರುವ ಕೆಲಸ ಮಾಡಲಿಲ್ಲ. ಅಂತಹ ಸ್ವಾರ್ಥ ಕೆಲಸ ಮಾಡಲ್ಲ ಅದನ್ನು ಯಡಿಯೂರಪ್ಪ ಅರ್ಥ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv