ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಓರ್ವಕಲ್ ಎಂಬಲ್ಲಿ ಅಪಘಾತಕ್ಕೆ ಒಳಗಾದ ಮಂಡ್ಯ ಜಿಲ್ಲೆ ಬೆಳ್ಳೂರು ಗ್ರಾಮದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ವ್ಯವಸ್ಥೆ ಮಾಡಲಾಗಿದೆ.
ಅಪಘಾತದ ವಿಷಯ ತಿಳಿದ ಕೂಡಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ಫಕೀರಪ್ಪ ಕಾಗಿನೆಲೆ ಅವರನ್ನು ಸಂಪರ್ಕಿಸಿ ಇವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕರ್ನೂಲ್‍ನಲ್ಲಿ ಬಸ್ ಪಲ್ಟಿ- ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಸದ್ಯ ಕರ್ನಾಟಕ ಮೂಲದವರೇ ಆಗಿರುವ ಫಕೀರಪ್ಪ ಅವರು ಪ್ರಯಾಣಿಕರನ್ನು ಬಸ್ ವ್ಯವಸ್ಥೆ ಮಾಡಿ ಕಳುಹಿಸಲು ಕ್ರಮವಹಿಸಿದ್ದಾರೆ. ಈ ಬಗ್ಗೆ ಸಿಎಂ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಆಗಿದೆ.
ಏನಿದು ಘಟನೆ:
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮಸ್ಥರು ಒಂದು ಬಸ್‍ನಲ್ಲಿ ಇದೇ ತಿಂಗಳ 18ರಂದು ಪ್ರವಾಸ ಹೊರಟಿದ್ದರು. ಮಹಾನಂದಿ ದರ್ಶನ ಮುಗಿಸಿಕೊಂಡು ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಬಸ್ ಬಲ್ಟಿಯಾಗಿ ಗೋವಿಂದ ಸ್ವಾಮಿ ಎಂಬವರು ಮೃತಪಟ್ಟಿದ್ದಾರೆ. ಬಸ್ ನಲ್ಲಿ 45ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ 3 ಮಂದಿಯ ಸ್ಥಿತಿ ಗಂಭೀರವಾಗಿದೆ. ಸದ್ಯ ಗಾಯಾಳುಗಳು ಕರ್ನೂಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv