-ನೀಡಿದ ಭರವಸೆ ಈಡೇರಿಸಲು ಆಗಲಿಲ್ಲಾ ಅಂತಾ ಕಣ್ಣೀರು ಹಾಕಿದ್ದೇನೆ
ಬೆಂಗಳೂರು: ಯಾವುದೋ ಹಂಗಿನಲ್ಲಿ ನಾನು ಕೆಲಸ ಮಾಡ್ತಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಹಂಗಿನ ಬಗ್ಗೆ ಮಾತನಾಡಿದ್ದಾರೆ.
ರೈತರ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ರೈತರ ಸಾಲವನ್ನು 24 ಗಂಟೆಯಲ್ಲಿ ಮನ್ನಾ ಮಾಡಲು ಪ್ರಯತ್ನಿಸುತ್ತಿರುವೆ. ನೀಡಿದ ಭರವಸೆಯನ್ನು ಈಡೇರಿಸಲು ಆಗಲಿಲ್ಲಾ ಅಂತಾ ಕೆಲವೊಮ್ಮೆ ಕಣ್ಣೀರು ಹಾಕಿದ್ದೇನೆ. ಸಾಲಮನ್ನಾ ಮಾಡುವುದು ನಿಶ್ಚಿತ. ಹಾಗಂತ ಸರ್ಕಾರದ ಆಸ್ತಿಯನ್ನು ಮಾರಿ ಸಾಲಮನ್ನಾ ಮಾಡುವುದಿಲ್ಲ ಎಂದು ಹೇಳಿದರು.
Advertisement
ಸಾಲಮನ್ನಾ ನಿಮಿತ್ತ ಐಎಎಸ್ ಅಧಿಕಾರಿ ನೇಮಕ ಮಾಡಿದ್ದು, ಅವರೊಂದಿಗೆ ನಾನು ಕೆಲಸ ಮಾಡುತ್ತಿರುವೆ. ರಾಷ್ಟ್ರೀಯ ಬ್ಯಾಂಕ್‍ಗಳ ಜೊತೆ 10 ಬಾರಿ ಸಭೆ ಮಾಡಲಾಗಿದೆ. ಪರಿಣಾಮ ಬ್ಯಾಂಕ್‍ನವರು ಬಾಂಡ್ ವಿಚಾರವಾಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಅಂತ ತಿಳಿಸಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ನಿರ್ಧಾರ ಹೇಳಿಲ್ಲ ಎಂದು ರಾಷ್ಟ್ರೀಕೃತ ಬ್ಯಾಂಕ್‍ಗಳ ವಿರುದ್ಧ ಸಿಎಂ ಗರಂ ಆದರು.
Advertisement
Advertisement
ನಾನು ಯಾವುದೇ ಪತ್ರ, ಪುಸ್ತಕ ನೋಡಿ ಸಾಲಮನ್ನಾ ವಿಚಾರ ಹೇಳುವ ಅಗತ್ಯವಿಲ್ಲ. ಏಕೆಂದರೆ ಎಲ್ಲ ವಿಚಾರವೂ ನನ್ನ ತಲೆಯಲ್ಲಿ ಉಳಿದುಬಿಟ್ಟಿದೆ. ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ 21 ಲಕ್ಷ ರೈತರು ಸಾಲ ಪಡೆದಿದ್ದಾರೆ. ಅವರಲ್ಲಿ 2.80 ಲಕ್ಷ ರೈತರು ವಸೂಲಾಗದ ಸಾಲದ ಪ್ರಮಾಣ (ಎನ್‍ಪಿಎ) ಅಕೌಂಟ್ ಗಳಿವೆ. ಇಂತಹ ಖಾತೆಗಳಿಗೆ ಒಂದು ಬಾರಿ ಹಣ ಪಾವತಿಸಿದರೆ ನಮಗೆ ರಿಲ್ಯಾಕ್ಸ್ ಕೊಡುತ್ತೀರಾ ಅಂತ ಕೇಳಿದ್ದೇನೆ. 17 ಲಕ್ಷ ರೈತರ ಸಾಲದಲ್ಲಿ 50 ಸಾವಿರ ಮೊತ್ತದ ಸಾಲಕ್ಕೆ 6,500 ಕೋಟಿ ರೂ. ಹಣ ಮೀಸಲಿಟ್ಟಿದ್ದೇವೆ. ಉಳಿದಂತೆ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿರುವ 2 ಲಕ್ಷ ರೂ.ವರೆಗಿನ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದರು.
Advertisement
ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ:
ಸಾಲಮನ್ನಾ ಯೋಜನೆ ದೊಡ್ಡ ಕೆಲಸವಾಗಿದೆ. ಯಾವುದೇ ಮಧ್ಯವರ್ತಿಗಳು ಭ್ರಷ್ಟಾಚಾರ ಎಸಗದಂತೆ ಎಚ್ಚರಿಕೆಯಿಂದ ಹಂತ ಹಂತವಾಗಿ ಯೋಜನೆ ಜಾರಿಗೆ ತರಲಾಗುತ್ತಿದೆ. ಒಂದು ವೇಳೆ ಇದರಲ್ಲಿ ಭ್ರಷ್ಟಾಚಾರ ನಡೆದರೆ ನಾನು ಕೋರ್ಟ್ ಮುಂದೆ ಹಾಜರಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ರೈತರಿಗೆ ಅನ್ಯಾಯ ಆಗಬಾರದು. ಸಾಲಮನ್ನಾ ಹಣ ರೈತರಿಗೆ ಹೋಗಬೇಕು ಅಂತ ಕೆಲಸ ಮಾಡುತ್ತಿದ್ದೇವೆ. ವೈಜ್ಞಾನಿಕವಾಗಿ ಕೆಲಸ ನಡೆದಿದ್ದು, ಅಧಿಕಾರಿಗಳಿಗೆ ಯಾವುದೇ ಹಂತದಲ್ಲಿಯೂ ಹಣ ಹೊಡೆಯಲು ಅವಕಾಶ ನೀಡಲ್ಲ ಎಂದರು.
ಹಿಂದಿನ ಸರ್ಕಾರವು 15 ವರ್ಷಕ್ಕೆ ಆಗುವಷ್ಟು ಕೆಲಸಕ್ಕೆ ಆದೇಶ ಮಾಡಿದೆ. ಅದರ ಹಣ ಹೊಂದಿಸುವುದೇ ನಮಗೆ ಕಷ್ಟವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಸಹಕಾರ ಸಂಘಗಳ ಸಾಲಮನ್ನಾ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ನಾನು ನಿಮ್ಮ ಪರ, ಹೋರಾಟ ಬೇಡ:
ಕಬ್ಬು ಬೆಳೆಗಾರರ ಸಮಸ್ಯೆ ವಿಚಾರವಾಗಿ ಮಾತನಾಡಿದ ಸಿಎಂ, ರೈತರ ಜೊತೆ ಸುದೀರ್ಘವಾಗಿ ಸಭೆ ಮಾಡಿದ್ದೇನೆ. ನಾನು ಸಿಎಂ ಆಗುವ ಮುನ್ನ ಸಕ್ಕರೆ ಕಾರ್ಖಾನೆ ಮಾಲೀಕರು 2,000 ಕೋಟಿ ರೂ. ಎಫ್‍ಆರ್ ಪಿ ದರ ನೀಡರಲಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ ಮಾಲೀಕರ ಸಭೆ ನಡೆಸಿ ಹಣ ಕೊಡಿಸಲು ಕ್ರಮ ತೆಗೆದುಕೊಂಡಿದ್ದೇನೆ. ಇದರಿಂದಾಗಿ ಈಗ 35 ಕೋಟಿ ರೂ. ಮಾತ್ರ ಬಾಕಿ ಇದೆ ಎಂದು ತಿಳಿಸಿದರು.
ರೈತರು ಕಬ್ಬು ನೀಡುವಾಗ ಸಕ್ಕರೆ ಮಾಲೀಕರ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಸಕ್ಕರೆ ಬೆಲೆ ಕಡಿಮೆ ಆಗಿದ್ದಕ್ಕೆ ಕಡಿಮೆ ಹಣ ಕೊಡುತ್ತೇವೆ ಅಂತ ಮಾಲೀಕರು ಪಟ್ಟು ಹಿಡಿದರು. ಬಳಿಕ ಖರೀದಿ ಮಾಡಿರುವ ಹಣವನ್ನೇ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿತು. ಅದನ್ನು ಮಾಲೀಕರು ಉಲ್ಲಂಘನೆ ಮಾಡಿದ್ದರೆ ನನಗೆ ಮಾಹಿತಿ ನೀಡಿ, ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ರೈತರಿಗೆ ಅಭಯ ನೀಡಿರುವೆ ಎಂದರು.
ನಾನು ಇನ್ನೊಂದು ಸಭೆ ಮಾಡುತ್ತೇನೆ. ನಾನು ನೀವು ರಾಜ್ಯ ಬಿಟ್ಟು ಹೋಗಲ್ಲ. ರೈತರು ಸುಮ್ಮನೆ ಹೋರಾಟ ಮಾಡುವುದು ಬೇಡ. ಯಾವುದೇ ಸಮಸ್ಯೆ ಇದ್ದರೂ ನಾನು ಇರುವವರೆಗೂ ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ. ಪ್ರತಿಭಟನೆ ಮಾಡಬೇಡಿ ಎಂದು ಸಿಎಂ ರೈತರಿಗೆ ಮನವಿ ಮಾಡಿಕೊಂಡರು.
ಉತ್ತರ ಕರ್ನಾಟಕ ಬಹುತೇಕ ರಾಜಕಾರಣಿಗಳೇ ಸಕ್ಕರೆ ಕಾರ್ಖಾನೆಯ ಮಾಲೀಕರಾಗಿದ್ದಾರೆ. ಇದೇ ದೊಡ್ಡ ಸಮಸ್ಯೆ ಆಗಿರುವುದು. ರೈತರ ಅಮಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾವು ಪ್ರಶ್ನೆ ಮಾಡಿದರೆ, ಏಕೆ ತಲೆ ಕೆಡಿಸಿಕೊಳ್ಳುತ್ತಿರಾ ನಮಗೆ ಪ್ರಶ್ನೆ ಮಾಡುತ್ತಾರೆ. ಎಫ್‍ಆರ್‍ಪಿ ದರ ಕೊಡಬೇಕು ಅಂತ ಮಾಲೀಕರಿಗೆ ಸೂಚನೆ ನೀಡಿದ್ದೇವೆ. ತೂಕದಲ್ಲಿ ಮೋಸ ವಿಚಾರದಲ್ಲಿ ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv