– ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಸುಳಿವು ಬಿಚ್ಚಿಟ್ಟ ಸಿಎಂ
– ಪೂರ್ವನಿರ್ಧರಿತ ಕಾರ್ಯಕ್ರಮದಿಂದಾಗಿ `ಅಂಬಿ ನಮನ’ಕ್ಕೆ ಗೈರು
ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಥವಾ ಪುತ್ರ ಅಭಿಷೇಕ್‍ಗೆ ಮಂಡ್ಯ ಲೋಕಸಭಾ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ.
ಅಂಬರೀಶ್ ನಿಧನರಾದ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಥವಾ ಅಭಿಷೇಕ್ ಅಂಬರೀಶ್ ಅವರನ್ನು ನಿಲ್ಲಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನುವ ಸುದ್ದಿ ಈಗ ಮುನ್ನೆಲೆಗೆ ಬಂದಿದೆ. ಈ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಸಿಎಂ, ಅಂಬರೀಶ್ ಕುಟುಂಬ ಕಾಂಗ್ರೆಸ್‍ನಲ್ಲಿದೆ. ರೆಬಲ್ ಸ್ಟಾರ್ ಜೆಡಿಎಸ್ ಪಕ್ಷಕ್ಕೆ ಬಂದಿರಲಿಲ್ಲ. ಆದರೆ ಅವರು ವಿಧವಶರಾಗಿದ್ದಾಗ ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಭಾವನೆಗೆ ಸ್ಪಂದಿಸಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿ ಗೌರವ ಸಲ್ಲಿಸಿದ್ದೇನೆ. ಆದರೆ ಜೆಡಿಎಸ್ ಪಕ್ಷಕ್ಕೆ ಅಂಬಿ ಆಪ್ತರಾಗಿದ್ದರೂ ಎನ್ನುವುದು ಸುಳ್ಳು ಎಂದು ಹೇಳುವ ಮೂಲಕ ಮಂಡ್ಯ ಕ್ಷೇತ್ರದ ಟಿಕೆಟ್ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.
Advertisement
Advertisement
ಟಿಕೆಟ್‍ಗಾಗಿ ಹೋರಾಡುವುದಕ್ಕೆ ಇದು ಮಹಾಭಾರತದ ಕುರುಕ್ಷೇತ್ರವಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಯನ್ನು ಪ್ರಕಟ ಮಾಡುತ್ತೇವೆ ಎಂದ ಅವರು, ಮಂಡ್ಯ ಕ್ಷೇತ್ರದ ಅಭ್ಯರ್ಥಿ ಬಗ್ಗೆ ತೀರ್ಮಾನ ಆಗಿಲ್ಲ. ನಮ್ಮ ಕಾರ್ಯಕರ್ತರು ನನ್ನ ಪುತ್ರ ನಿಖಿಲ್ ಕುಮಾರ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಯಾರೆಂಬುದನ್ನು ಶೀಘ್ರವೇ ನಿರ್ಧರಿಸುತ್ತೇವೆ ಎಂದರು.
Advertisement
ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಲಾನ್ ರೂಪಿಸುತ್ತಿದ್ದೇವೆ. ಜಿಲ್ಲೆಯ ಜನರ ಮೇಲೆ ನಮ್ಮ ಕುಟುಂಬ ವಿಶೇಷ ಪ್ರೀತಿ ಹೊಂದಿದೆ. ಈ ಬಾರಿಯ ಬಜೆಟ್‍ನಲ್ಲಿ ಜಿಲ್ಲೆಗೆ ಕೆಲ ಯೋಜನೆಗಳನ್ನು ಮಾತ್ರ ಕೊಟ್ಟಿದ್ದೇವೆ. ಇದರಿಂದಾಗಿ ಮಂಡ್ಯದ ಅಭಿವೃದ್ಧಿ ವಿಚಾರದಲ್ಲಿ ನಮ್ಮಿಂದ ಅನ್ಯಾಯವಾಗಿದೆ. ಆದರೂ ಕೆಲವರು ಮಂಡ್ಯ, ಹಾಸನ ಬಜೆಟ್ ಎಂದು ಟೀಕೆ ಮಾಡುತ್ತಾರೆ ದೂರಿದರು.
Advertisement
ನಾನು ಸಿಎಂ ಆಗಲು ಮಂಡ್ಯ ಜನರ ಕೊಡುಗೆ ದೊಡ್ಡದು. ಮಂಡ್ಯ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಬದ್ಧನಾಗಿರುವೆ. ಜಿಲ್ಲೆಯನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದ ಅವರು, ಕೆಆರ್‍ಎಸ್ ಅಣೆಕಟ್ಟು ಒಡೆದು ಹಾಳು ಮಾಡುತ್ತಾರೆ ಅಂತ ಕೆಲವರು ಆರೋಪಿಸುತ್ತಾರೆ. ನಾನು ಹಾಗೇ ಮಾಡಲ್ಲ. ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಯಿಂದ ಈ ಭಾಗದ ಜನಕ್ಕೆ ಕೆಲಸ ಸಿಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದರು.
ಅಂಬಿ ನುಡಿನಮನ ಕಾರ್ಯಕ್ರಮಕ್ಕೆ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಅಂಬಿ ನುಡಿನಮನ ಕಾರ್ಯಕ್ರಮ ಯಾರು ಕೇಳಿ ನಿಗದಿ ಮಾಡಿದ್ದರು. ಚರ್ಚೆ ಮಾಡಿ ನಿಗದಿ ಮಾಡದೇ ಏಕಾಏಕಿ ನಿಗದಿ ಮಾಡಿದರೆ ನಾನು ಬರುವುದಕ್ಕೆ ಆಗುತ್ತಾ? ನಾನು ಮುಖ್ಯಮಂತ್ರಿಯಾಗಿದ್ದು ಮೊದಲೇ ಕಾರ್ಯಕ್ರಮಗಳು ಪೂರ್ವ ನಿಗದಿಯಾಗಿರುತ್ತದೆ ಎಂದು ಹೇಳಿದರು.
ಜೆಡಿಎಸ್ ಬಳಿ ಉಳಿದ ಎರಡು ಸಚಿವ ಸ್ಥಾನ ಹಂಚಿಕೆ ಹಾಗೂ ನಿಗಮ ಮಂಡಳಿ ನೇಮಕಾತಿ ಕುರಿತು ಪ್ರತಿಕ್ರಿಯೆ ನೀಡಿ ಕುಮಾರಸ್ವಾಮಿ ಅವರು, ಸೂಕ್ತ ಸಂದರ್ಭ ಬಂದಾಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಆದರೆ ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದರು.
ಕಾಂಗ್ರೆಸ್ ಜೊತೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡುತ್ತೇವೆ. ಅದರಲ್ಲಿ ಅನುಮಾನವಿಲ್ಲ. ನಮ್ಮ ಸರ್ಕಾರ ಐದು ವರ್ಷ ಭದ್ರವಾಗಿರುತ್ತದೆ. ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ. ಸರ್ಕಾರ ಬೀಳುತ್ತದೆ ಎನ್ನುವ ವಿಪಕ್ಷ ಶಾಸಕರು ಹಾಗೂ ನಾಯಕರ ಮಾತಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನ ಗಮನ ರಾಜ್ಯದ ಅಭಿವೃದ್ಧಿ ಕಡೆಗೆ. ಜನರ ನಿರೀಕ್ಷೆಯನ್ನು ಈಡೇರಿಸದೇ ನಾನು ನಿರ್ಗಮಿಸಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv