ಚಿಕ್ಕಮಗಳೂರು: ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿರುವ ಪರಮೇಶ್ ಬಗ್ಗೆ ನನ್ನ ಹತ್ತಿರ ಯಾಕೆ ಪ್ರಶ್ನೆ ಕೇಳುತ್ತಿರುವಿರಿ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪರಮೇಶ್ ಯಾರು? ಐಟಿ ದಾಳಿ ಆಗಿದ್ದಕ್ಕೆ ನಾನು ಏನು ಮಾಡಬೇಕು? ಅವರು ವ್ಯವಹಾರ ಮಾಡಿಕೊಂಡಿದ್ದರೆ ಅಧಿಕಾರಿಗಳು ಕಾನೂನು ರೀತಿಯ ಕ್ರಮಕೈಗೊಳುತ್ತಾರೆ ಎಂದು ಹೇಳಿದರು.
ಪರಮೇಶ್ 25 ವರ್ಷಗಳಿಂದ ಬಿಸಿನೆಸ್ ಮಾಡುತ್ತಿದ್ದಾರೆ. ಅವರೇನು ರಾಜಕೀಯ ವ್ಯಕ್ತಿನಾ? ಕಾನೂನಿನ ವಿರುದ್ಧವಾಗಿ ಯಾರೇ ಕೆಲಸ ಮಾಡಿದರು ತಪ್ಪೇ. ಐಟಿ ದಾಳಿಯ ವೇಳೆ ಪರಮೇಶ್ ಅವರ ಲಾಕರ್ ನಲ್ಲಿ ಸುಮಾರು 6.50 ಕೋಟಿ ರೂ. ಹಣ ಪತ್ತೆಯಾಗಿದ್ದು, ನನಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಕ್ಷದ ಅಭಿಮಾನಿಯೂ ಅಲ್ಲ. ದೂರದ ಸಂಬಂಧಿ ಅಷ್ಟೇ. ಅವರ ವಿರುದ್ಧ ಕ್ರಮ ತಗೆದುಕೊಳ್ಳಲು ನಾನೇನು ಬೇಡ ಅಂತ ಹೇಳಿಲ್ಲ ಎಂದು ತಿಳಿಸಿದರು.
ಏನಿದು ಪ್ರಕರಣ?:
ಶಿವಮೊಗ್ಗದ ಪರಮೇಶ್ ಅವರ ಮನೆ, ಶೋ ರೂಂ ಮೇಲೆ ಮಾರ್ಚ್ 28ರಂದು ಐಟಿ ದಾಳಿ ನಡೆಸಲಾಗಿತ್ತು. ಸತತ 20 ಗಂಟೆಗಳ ಸಮಯ 30 ಅಧಿಕಾರಿಗಳ ತಂಡ ಮನೆ ಶೋ ರೂಂನಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ಪತ್ತೆಯಾಗಿದ್ದ ಬ್ಯಾಂಕ್ ಲಾಕರಿನ ವಿವರಣೆ ಪಡೆದು ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದರು.
ಐಟಿ ಅಧಿಕಾರಿಗಳು ಗುರುವಾರ ರಾಷ್ಟ್ರೀಕೃತ ಬ್ಯಾಂಕಿಗೆ ತೆರಳಿ ಲಾಕರ್ ತೆರೆದ ಸಂದರ್ಭದಲ್ಲಿ ಕವರ್ ಗಳಲ್ಲಿ ತುಂಬಿದ್ದ ಹಣ ಪತ್ತೆಯಾಗಿದೆ. ಭಾರೀ ಹಣವನ್ನು ಕಂಡು ಐಟಿ ಆಧಿಕಾರಿಗಳು ಶಾಕ್ ಆಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬ್ಯಾಂಕ್ ಲಾಕರ್ ಪಡೆದಿರುವ ಬಗ್ಗೆ ದಾಖಲೆ ಸಿಕ್ಕ ಬಳಿಕ ಅಧಿಕಾರಿಗಳ ಲಾಕರ್ ಕೀ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಕೀ ಕಳೆದು ಹೋಗಿದ್ದಾಗಿ ಪರಮೇಶ್ವರ್ ತಿಳಿಸಿದ್ದರು ಎನ್ನಲಾಗಿದೆ. ಸದ್ಯ ಹಣವನ್ನು ಜಪ್ತಿ ಮಾಡಿರುವ ಐಟಿ ಇಲಾಖೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್ ನೀಡಿದೆ.