ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ- ಪ್ರತಿಭಟನಾ ನಿರತ ಮಹಿಳೆಗೆ ಏಕವಚನದಲ್ಲಿ ಸಿಎಂ ಕಿಡಿ

Public TV
2 Min Read
CM HDK KABBU

ಬೆಂಗಳೂರು: ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸುವ ವಿಚಾರಕ್ಕೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಮತ ಹಾಕುವಾಗ ಕುಮಾರಸ್ವಾಮಿ ನೆನಪಿಗೆ ಬಂದಿರಲಿಲ್ಲ. ಈಗ ಹಣ ಕೊಡಿ ಎಂದು ಪ್ರತಿಭಟನೆ ಮಾಡುವುದಕ್ಕೆ ಬಂದಿದ್ದೀಯಾ. ಹಾಗಾದರೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆ? ಈವಾಗ ಇದರ ಬಗ್ಗೆ ಅರಿವು ಬಂದಿದ್ಯಾ ಎಂದು ರೈತ ಮಹಿಳೆಗೆ ಏಕ ವಚನದಲ್ಲೇ ಕಿಡಿಕಾರಿದರು.

BGK SUVARNA SOUDHA copy

ಸುವರ್ಣಸೌಧಕ್ಕೆ ರೈತರ ಮುತ್ತಿಗೆ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುವರ್ಣಸೌಧಕ್ಕೆ ಲಾರಿ ನುಗ್ಗಿಸಿದವರು ರೈತರಲ್ಲ. ರೈತರು ಸಹನಾ ಮೂರ್ತಿಗಳು. ಅವರುಗಳು ಇಂತಹ ಕೆಲಸವನ್ನು ಮಾಡುವುದಿಲ್ಲ. ರೈತರು ಕೃಷಿಯನ್ನು ದೇವರೆಂದು ಆರಾಧಿಸುವವರು. ಅಲ್ಲಿ ಹೋರಾಟ ಮಾಡುತ್ತಿರುವವರು ರೈತ ಎಂಬ ಪದಕ್ಕೆ ಅವಮಾನ ಮಾಡುತ್ತಿದ್ದಾರೆ. ದರೋಡೆ ಮಾಡುವವರು ಬೀಗ ಒಡೆಯುತ್ತಾರೆ. ಅಲ್ಲಿ ಬೀಗ ಒಡೆದವರು ರೈತರಲ್ಲ. ನನ್ನ ತಾಳ್ಮೆಗೂ ಒಂದು ಮಿತಿ ಇದೆ. ನನ್ನ ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಗುಡುಗಿದರು.

ಸುವರ್ಣಸೌಧದ ಗೇಟ್ ಮುರಿದವರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ರೈತರ ಹೆಸರು ಬಳಸಿ ಹೀಗೆ ಮಾಡಿದರೆ ನಾನು ಸಹಿಸುವುದಿಲ್ಲ. ಇಂತಹ ಪ್ರತಿಭಟನೆಗಳನ್ನು ಮಾಡಿಸುತ್ತಿರುವವರು ಮಾಧ್ಯಮದವರು. ಅವರಿಗೆ ಸದಾ ಸುದ್ದಿ ಬೇಕು ಅಂತಾ ಪ್ರತಿಭಟನೆ ಮಾಡುತ್ತಿದ್ದಾರೆಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

vlcsnap 2018 11 18 13h07m31s186

ಏನಿದು ಪ್ರತಿಭಟನೆ?
ಕಬ್ಬು ಬೆಳೆಗಾರರ ಜೊತೆ ಬೆಳಗಾವಿಯಲ್ಲಿ ಸೋಮವಾರ ನಿಗದಿಯಾಗಿದ್ದ ಸಭೆಯನ್ನು ಏಕಾಏಕಿ ರದ್ದುಗೊಳಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಕಬ್ಬು ತುಂಬಿದ್ದ ಲಾರಿಗಳ ಸಮೇತ ಸುವರ್ಣ ಸೌಧದ ಬಳಿ ಹಾಜರಾಗಿದ್ದರು. ರೈತರ ದಿಢೀರ್ ಹೋರಾಟದಿಂದ ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರು, ಸಾಕಷ್ಟು ಸಂಖ್ಯೆಯಲ್ಲಿದ್ದ ರೈತರನ್ನ ತಡೆಯಲು ಹರಸಾಹಸ ಪಟ್ಟರು. ಸುವರ್ಣಸೌಧದ ಗೇಟ್ ಬಂದ್ ಮಾಡಿದ ಬಳಿಕವೂ ಶಾಂತರಾಗದ ರೈತರು ಕಲ್ಲಿನಿಂದ ಗೇಟ್ ಬಾಗಿಲು ಮುರಿಯಲು ಯತ್ನಿಸಿದ್ದರು. ಅಲ್ಲದೇ ಗೇಟ್ ಕೀ ಯನ್ನು ಪೊಲೀಸರಿಂದ ಕಿತ್ತುಕೊಳ್ಳುವ ಪ್ರಯತ್ನವೂ ನಡೆಸಿದ್ದರು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸರು ಕೂಡ ರೈತರನ್ನು ನಿಯಂತ್ರಣ ಮಾಡಲು ವಿಫಲರಾಗಿದ್ದರು. ಸುವರ್ಣ ಸೌಧದ ಗೇಟ್ ಮುಂಭಾಗದಲ್ಲೂ ಲಾರಿಗಳನ್ನು ನಿಲ್ಲಿಸಿ, ಕಬ್ಬನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು.

vlcsnap 2018 11 18 18h19m34s753

ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರೈತ ಮಹಿಳೆಯೊಬ್ಬರು, ಸಿಎಂ ಕುಮಾರಸ್ವಾಮಿ ಅವರು ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದಿದ್ದರಾ? ಸುಮಾರು 200 ವಾಹನಗಳ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಸಿಎಂ ನಾಳೆ ಸುವರ್ಣಸೌಧಕ್ಕೆ ಆಗಮಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ತೀವ್ರವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *