ಬೆಂಗಳೂರು: ಲೋಕಸಮರ ಫಲಿತಾಂಶದ ಬಳಿಕ ಕಾಂಗ್ರೆಸ್ ಅತೃಪ್ತ ಶಾಸಕರ ಬಣ ಫುಲ್ ಆ್ಯಕ್ಟೀವ್ ಆಗಿದೆ. ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ನಿರಂತರವಾಗಿ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದು, ಅತೃಪ್ತ ಕೈ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಇತ್ತೀಚೆಗೆ ಉಮೇಶ್ ಜಾಧವ್ ಮತ್ತು ಎಸ್.ಎಂ.ಕೃಷ್ಣರನ್ನು ಭೇಟಿಯಾಗಿರುವ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದು, ಈ ಮೂಲಕ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಕುಮಾರಸ್ವಾಮಿ ಅವರು ಕೈ ಶಾಸಕರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳ ಅಭಿವೃದ್ಧಿಯತ್ತ ಗಮನ ನೀಡುತ್ತಿಲ್ಲ ಎಂದು ಅತೃಪ್ತರ ಬಣ ಆರೋಪಿಸುತ್ತಿದೆ. ಈ ಆರೋಪದಿಂದ ಮುಕ್ತವಾಗಲು ಸಿಎಂ ಕೈ ಶಾಸಕರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲ್ಲ ಅತೃಪ್ತ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿ, ಅನುದಾನ ನೀಡಲಾಗುವುದು ಎಂಬ ಸಂದೇಶವನ್ನು ಸಿಎಂ ಮುಂದಿನ ದಿನಗಳಲ್ಲಿ ರವಾನಿಸಲಿದ್ದಾರೆ ಎನ್ನಲಾಗುತ್ತಿದೆ. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮೂಲಕ ಕೈ ಶಾಸಕರ ವಿಶ್ವಾಸ ಗಳಿಸಲು ಸಿಎಂ ಮುಂದಾಗುವ ಸಾಧ್ಯತೆಗಳಿವೆ.