ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮಂಡ್ಯ ಕಾಂಗ್ರೆಸ್ ನಾಯಕರ ಸಭೆಯ ವಿಡಿಯೋ ಲೀಕ್ ಮಾಡಿಸಿದ್ದಾರೆ ಎಂದು ಹೇಳಲಾಗಿದ್ದು, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಮೇಲೆ ಫುಲ್ ಗರಂ ಆಗಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರು ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ಫೋನ್ ಮಾಡಿ ಫುಲ್ ಕ್ಲಾಸ್ ತಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದುವರೆಗೆ ತೆರೆಮರೆಯಲ್ಲಿ ಆಟ ಆಡಿದ್ದವರೆಲ್ಲಾ ಈಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ನೀವೇನು ಮಾಡುತ್ತಿದ್ದೀರಾ ಎಂದು ದಿನೇಶ್ ಗುಂಡೂರಾವ್ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮೈತ್ರಿ ಧರ್ಮ ಪಾಲಿಸದ ಕೈ ನಾಯಕರು ಮಂಡ್ಯದಲ್ಲಿ ಏನೇನು ಮಾಡಿದ್ದಾರೆ ಅನ್ನೋದು ಎಲ್ಲ ನನಗೆ ಗೊತ್ತಿದೆ. ಇನ್ನೂ ಚುನಾವಣಾ ಫಲಿತಾಂಶ ಬಂದಿಲ್ಲ. ಅಷ್ಟರಲ್ಲೇ ಎಲ್ಲ ಒಟ್ಟಿಗೆ ಕುಳಿತು ಸಭೆ ನಡೆಸುತ್ತಿದ್ದಾರೆ. ಯಾರು ಏನು ಆಟ ಆಡುತ್ತಿದ್ದಾರೆ ಎಲ್ಲವೂ ನನಗೆ ಗೊತ್ತಿದೆ. ಇಷ್ಟು ಬಹಿರಂಗವಾಗಿ ಮೈತ್ರಿ ಮುರಿದವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ನೇರವಾಗಿಯೇ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲವನ್ನು ಕುಳಿತು ಮಾತನಾಡೋಣ, ನೀವು ಬೆಂಗಳೂರಿಗೆ ಬಂದ ಮೇಲೆ ಭೇಟಿಯಾಗೋಣ ಎಂದು ದಿನೇಶ್ ಗುಂಡೂರಾವ್ ಸಮಾಧಾನ ಪಡಿಸುವ ಯತ್ನ ಮಾಡಿದ್ದಾರೆ. ಆದರೆ ಸಿಎಂ ಏನು ಮಾಡುತ್ತೀರಾ ನೋಡಿ. ಹೀಗೆ ಆದರೆ ಮುಂದುವರಿಯಲು ಎಲ್ಲ ರೀತಿಯಲ್ಲೂ ಕಷ್ಟವಾಗುತ್ತೆ ಮಂಡ್ಯ ನಾಯಕರ ಮೇಲಿನ ಸಿಟ್ಟನ್ನು ಆಕ್ರೋಶ ಭರಿತರಾಗಿ ಸಿಎಂ ಹೊರಹಾಕಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.