ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲಾ ಡ್ಯಾಂಗಳು ಬಹುತೇಕ ತುಂಬುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಮಳೆಯಿಂದಾಗಿ ಎಷ್ಟು ನೀರು ಭರ್ತಿಯಾಗಿದೆಯೋ ಅಷ್ಟನ್ನು ಬಿಟ್ಟುಬಿಡಿ. ಒಟ್ಟಿನಲ್ಲಿ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕೋ ಅಷ್ಟು ನೀರನ್ನು ಬಿಡಿ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement
ಈಗಾಗಲೇ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು, ರಾಮನಗರ ಹಾಗೂ ಮಂಡ್ಯದಿಂದ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಗುತ್ತದೆ. ಇದರ ಜೊತೆಗೆ ಜಲಾಶಯದಿಂದಲೂ ಅಲ್ಪ ಪ್ರಮಾಣದ ನೀರು ತಮಿಳುನಾಡಿಗೆ ಹರಿಯಬಿಟ್ಟರೆ ಜುಲೈ ತಿಂಗಳಲ್ಲಿ ಬಿಡಬೇಕಾದ ನೀರಿನ ಪ್ರಮಾಣ ಸರಿಯಾಗುತ್ತದೆ. ಹೀಗಾಗಿ ಜುಲೈ ತಿಂಗಳಲ್ಲಿ ಬಿಡಬೇಕಾದ ನೀರನ್ನು ಬಿಟ್ಟಿದ್ದು, ಪ್ರಾಧಿಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಿ ಅಂತ ಕೇಳಬಹುದು ಎಂಬ ದೃಷ್ಟಿಯಿಂದ ಕುಮಾರಸ್ವಾಮಿ ಈ ರೀತಿಯ ಆದೇಶ ಮಾಡಿರಬಹುದೆಂದು ಹೇಳಲಾಗುತ್ತಿದೆ.
Advertisement
ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284 ಅಡಿ ಇದ್ದು, ಮಂಗಳವಾರ 2,282 ಅಡಿ ನೀರು ಸಂಗ್ರಹವಾಗಿದೆ. 32,635 ಕ್ಯೂಸೆಕ್ ಒಳಹರಿವು ಇದ್ದರೆ, 36 ಸಾವಿರ ಕ್ಯೂಸೆಕ್ ಹೊರ ಹರಿವು ಇದೆ.
Advertisement
Advertisement
ಸುಪ್ರೀಂಕೋರ್ಟ್ ಆದೇಶದ ಅನ್ವಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಜುಲೈ 7 ರಂದು ನವದೆಹಲಿಯಲ್ಲಿ ಮೊದಲ ಸಭೆ ನಡೆಸಲಾಯಿತು. ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಸೂದ್ ಹುಸೇನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿನ ಪ್ರತಿನಿಧಿ ಎಸ್.ಕೆ ಪ್ರಭಾಕರನ್, ತಿಂಗಳುವಾರು ಹಂಚಿಕೆ ಪೈಕಿ ಜುಲೈ ನಲ್ಲಿ 34 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕು, ಈ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲು ಮನವಿ ಮಾಡಿದ್ದರು. ಆದರೆ ತಮಿಳುನಾಡು ಪ್ರಸ್ತಾಪವನ್ನು ರಾಜ್ಯದ ಪ್ರತಿನಿಧಿ ರಾಕೇಶ್ ಸಿಂಗ್ ತಿರಸ್ಕರಿಸಿದ್ದರು. ಬಳಿಕ ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸಿ ಈ ಕುರಿತು ಪ್ರತಿಕ್ರಿಯಿಸುವುದಾಗಿ ತಿಳಿಸಿ ಸಭೆಯಿಂದ ಹೊರ ಬಂದಿದ್ದರು. ಅಂದಹಾಗೇ ಸುಪ್ರೀಂಕೋರ್ಟ್ ಆದೇಶದ ಬಳಿಕ ನ್ಯಾಯಬದ್ಧವಾಗಿ ತಮಿಳುನಾಡು 31.24 ಟಿಎಂಸಿ ನೀರು ಕೇಳಬೇಕಿತ್ತು. ಆದರೆ 31.24 ಟಿಎಂಸಿ ಬದಲು 2.5 ಟಿಎಂಸಿ ನೀರು ಹೆಚ್ಚುವರಿ ಕೇಳಿ ಪ್ರಸ್ತಾಪ ಸಲ್ಲಿಸಿದ್ದಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತ್ತು.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secon ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.