ಬೆಂಗಳೂರು: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 26 ಅಂಶಗಳನ್ನು ಮಾಧ್ಯಮ ಹೇಳಿಕೆಯಲ್ಲಿ ಬಿಡುಗಡೆಗೊಳಿಸಿ ರೈತರ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಪ್ರಕಟಣೆಯಲ್ಲಿ ಏನಿದೆ?:
1. ನಾನು ಹಿಂದಿನಿಂದಲೂ ರೈತರ ಪಕ್ಷಪಾತಿಯಾಗಿದ್ದವನು. ಇದರಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದವಿಲ್ಲ.
2. ಮೊನ್ನೆ ಮೊನ್ನೆ ಬೆಳಗಾವಿಯ ಜಿಲ್ಲೆಯ ರೈತರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ನ್ಯಾಯಾಲಯದಿಂದ ಬಂಧನ ವಾರಂಟ್ ಹೊರಡಿಸಿದಾಗಲೂ ಮಧ್ಯಪ್ರವೇಶಿಸಿ ಸಂಧಾನ ಸಭೆ ನಡೆಸಿ, ರೈತರ ರಕ್ಷಣೆಗೆ ಪ್ರಯತ್ನ ನಡೆಸಿದವನು ನಾನು.
3. ಉತ್ತರ ಕರ್ನಾಟಕದವರು, ಇದು ಬ್ಯಾಂಕು ಮತ್ತು ರೈತರ ನಡುವಿನ ವಿಷಯ ಎಂದು ಕೈಕಟ್ಟಿ ಕೂರಲಿಲ್ಲ.
Advertisement
Advertisement
4. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಏನೇನು ಪ್ರಯತ್ನ ಮಾಡಬಹುದು ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇನೆ.
5. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ. ಈಗಾಗಲೇ ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ.
6. ಬುಧವಾರ ಮಧ್ಯಾಹ್ನ 3.00 ಗಂಟೆಗೆ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಒಮ್ಮತದ ನಿರ್ಣಯ ಹೊರಹೊಮ್ಮುತ್ತದೆ ಎನ್ನುವ ವಿಶ್ವಾಸ ನನ್ನದು.
Advertisement
7. ಇದಕ್ಕೆ ಪೂರ್ವಭಾವಿಯಾಗಿ ಭಾನುವಾರ ರಾತ್ರಿ ಸಕ್ಕರೆ ಆಯುಕ್ತರು ಬೆಳಗಾವಿಯಲ್ಲಿ ಒಂದು ಸಭೆ ನಡೆಸಿ ಚರ್ಚಿಸಿದ್ದಾರೆ.
8. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಪ್ರಾಮಾಣಿಕವಾಗಿ ಮಾಡುವೆ. ರೈತರ ಹಿತ ಬಿಟ್ಟರೆ ಬೇರೆ ಯಾವ ಮುಲಾಜೂ ನನಗಿಲ್ಲ. ಈ ಬಗ್ಗೆ ನಮ್ಮ ಬದ್ಧತೆ ಸಂಶಯಾತೀತ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.
9. ನಮ್ಮ ಮೈತ್ರಿ ಸರ್ಕಾರ ರೈತಪರ ಸರ್ಕಾರ. ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಅಮೂಲಾಗ್ರವಾಗಿ ಪರಿಹಾರ ಕಂಡುಕೊಳ್ಳಲು ನಾವು ಮುಂದಾಗಿದ್ದೇವೆ.
Advertisement
10. ಸಾಲ ಮನ್ನಾ ರೈತರ ಸಮಸ್ಯೆಗಳಿಗೆ ಪರಿಹಾರ ಅಲ್ಲ. ಆದರೆ ಒಮ್ಮೆ ರೈತ ಋಣಭಾರ ಕಳೆದುಕೊಂಡು ಹೊಸ ಬದುಕು ಪ್ರಾರಂಭಿಸಬೇಕು ಎಂಬ ಆಶಯದೊಂದಿಗೆ ಸಹಕಾರಿ ಬ್ಯಾಂಕುಗಳಷ್ಟೇ ಅಲ್ಲ, ವಾಣಿಜ್ಯ ಬ್ಯಾಂಕುಗಳಲ್ಲಿನ ಬೆಳೆ ಸಾಲಕ್ಕೂ ನಮ್ಮ ಸರ್ಕಾರ ಮುಂದಾಗಿದೆ. ಜೊತೆಗೆ ಸಿದ್ಧತೆಯ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರವೇ ಸಾಲಮನ್ನಾ ಪ್ರಕ್ರಿಯೆ ಪ್ರಾರಂಭವಾಗಲಿದೆ.
11. ಇದಕ್ಕೆ ಸುಮಾರು 48 ಸಾವಿರ ಕೋಟಿ ರೂ. ಸಂಪನ್ಮೂಲ ಅಗತ್ಯವಿದ್ದು, ಪ್ರತಿ ಸಾಲದ ಖಾತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಸ್ವಲ್ಪ ಸಮಯಾವಕಾಶದ ಅಗತ್ಯವಿದೆ. ರೈತ ಬಾಂಧವರು ಹತಾಶರಾಗದೆ ತಾಳ್ಮೆಯಿಂದ ಇರಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ.
12. ನಮ್ಮ ಅಧಿಕಾರಿಗಳು ಈ ಯೋಜನೆಯ ಜಾರಿಗಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ. ಮಾಹಿತಿ ಸಂಗ್ರಹ, ಪರಿಶೀಲನೆಯ ಕಾರ್ಯ ನಡೆಸುತ್ತಿದ್ದಾರೆ. ದಯವಿಟ್ಟು ನೀವೂ ಸಹಕರಿಸಿ ಎಂದು ಮನವಿ ಮಾಡುತ್ತೇನೆ.
13. ಇದಲ್ಲದೆ ಸಾವಯವ ಕೃಷಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಹಾಗೂ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಕುರಿತು ನಮ್ಮ ಮೈತ್ರಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
14. ರೈತರ ಕೃಷಿ ಪದ್ಧತಿ ಬದಲಾವಣೆಯ ಮೂಲಕ ಕೃಷಿಕ ವೃತ್ತಿ ಲಾಭದಾಯಕವಾಗಬೇಕು ಎಂಬ ಕನಸು ಕಂಡವನು ನಾನು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವೂ ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ.
15. ಆದರೆ ಯಾವುದೂ ರಾತ್ರೋರಾತ್ರಿ ಫಲ ನೀಡುವಂತದ್ದಲ್ಲ. ನಿಮ್ಮ ಸಹಕಾರ, ಸಹಯೋಗದೊಂದಿಗೆ ಮಾತ್ರ ಈ ಪ್ರಯತ್ನಗಳು ಸಫಲವಾಗಲು ಸಾಧ್ಯ. ಈ ದೂರಗಾಮಿ ಕಾರ್ಯಕ್ರಮಗಳ ಜಾರಿಗೆ ನಿಮ್ಮ ಮುಕ್ತ ಮನದ ಸಹಕಾರ ಮತ್ತು ನನಗೆ ಸಮಯಾವಕಾಶ ನೀಡಿ ಎನ್ನುವುದಷ್ಟೇ ನನ್ನ ಮನವಿ.
16. ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತು ನಾನು ಪ್ರಾರಂಭದಿಂದಲೇ ಜಿಲ್ಲಾಡಳಿತಗಳ ಜೊತೆ ಸಂಪರ್ಕದಲ್ಲಿದ್ದು, ಜಿಲ್ಲಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಲೇ ಬಂದಿದ್ದೇನೆ.
17. ಆದರೆ ರೈತರು ಸುವರ್ಣ ವಿಧಾನಸೌಧಕ್ಕೆ ನುಗ್ಗಿ ಪ್ರತಿಭಟನೆ ನಡೆಸಿರುವುದು ದುರದೃಷ್ಟಕರ.
18. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ ಕಾನೂನು ಸುವ್ಯವಸ್ಥೆಗೆ ಭಂಗ ತರುವುದು ಸರಿಯಲ್ಲ.
19. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಷ್ಟೇ ಆಗಿದೆ. ಈಗಾಗಲೇ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಹಲವು ಸಭೆಗಳನ್ನು ನಡೆಸಿದ್ದೇವೆ.
20. ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗೆ 20 ಕೋಟಿ ರೂ. ನೆರವನ್ನೂ ಘೋಷಿಸಿದ್ದೇವೆ.
21. ನಾವು ರೈತಪರ ನಿಲುವುಗಳನ್ನೇ ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ಸಮಸ್ಯೆಗಳಿಗೂ ನಾವು ಸ್ಪಂದಿಸುತ್ತೇವೆ. ನಮಗೆ ಸ್ಪಲ್ಪ ಕಾಲಾವಕಾಶ ನೀಡಿ ಎನ್ನುವುದಷ್ಟೇ ನಮ್ಮ ಮನವಿ.
22. ಬೆಳಗಾವಿಯಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ನನ್ನನ್ನು ನಿಂದಿಸಿದ ಬಗೆಗೆ ನನಗೆ ಅತೀವ ನೋವಾಗಿತ್ತು. ಈ ಬಗ್ಗೆ ನಾನು ನೀಡಿದ ಪ್ರತಿಕ್ರಿಯೆಯಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ನನ್ನ ಮಾತಿನ ಅರ್ಥವನ್ನು ಗ್ರಹಿಸದೆ, ಚರ್ಚೆಯಾಗುತ್ತಿರುವುದು ದುರದೃಷ್ಟಕರ.
23. ರೈತರ ಬಗ್ಗೆ, ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವ ಇಟ್ಟುಕೊಂಡ ವ್ಯಕ್ತಿ ನಾನು.
24. ರೈತ ಬಾಂಧವರೆ, ನೆನಪಿಡಿ, ಇದು ನಿಮ್ಮ ಸರ್ಕಾರ. ನಿಮ್ಮ ಹಿತ ಕಾಯಲು ಏನೆಲ್ಲ ಪ್ರಯತ್ನ ಮಾಡಲು ಸಾಧ್ಯವೋ, ಅಂತಹ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತ್ತದೆ.
25. ನಾಳಿನ ಸಭೆಯಲ್ಲಿ ನಿಮ್ಮ ಒಳಿತನ್ನಷ್ಟೇ ಕೇಂದ್ರೀಕರಿಸಿ, ಸರ್ಕಾರ ಮಾತುಕತೆ ನಡೆಸಲಿದೆ.
26.ನಾಳಿನ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಎಲ್ಲ ಅಂಶಗಳನ್ನು ಕೂಲಂಕುಷವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತೇನೆ. ನಿಮ್ಮ ನೋವಿಗೆ ನಾವು ಖಂಡಿತ ಸ್ಪಂದಿಸುತ್ತೇವೆ.
ರೈತರು ಇಂದು ಮುಂಜಾನೆಯೇ ಸಿಲಿಕಾನ್ ಸಿಟಿಗೆ ಆಗಮಿಸಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಆಕ್ರೋಶ, ಸಿಟ್ಟಿನ ಕಟ್ಟೆ ಒಡೆಯುತ್ತಿದ್ದಂತೆಯೇ ಇತ್ತ ಸಿಎಂ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದ ಈ ನಡೆಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews