ಹಾಸನ: ದೇಶದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಮ್ಮ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಿಮಿತ್ತ ಹಾಸನ ಜಿಲ್ಲೆ ಅರಸೀಕೆರೆಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದ ಹೊರಗೆ ಮತ್ತು ಒಳಗೆ ಅನೇಕ ಘಟನೆಗಳು ಘಟಿಸುತ್ತಿವೆ. ರಾಜ್ಯದಲ್ಲಿ ಅಂತ ಯಾವುದೇ ಅಹಿತಕರ ಘಟನೆ ಆಗಬಾರದು ಎಂದು ಸೂಕ್ಷ್ಮ ಪ್ರದೇಶ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇವೆ ಎಂದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ವಾತಾವರಣ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿ, ಇದು ಇಂದಿಗೆ ಮುಗಿಯುವ ಲಕ್ಷಣ ಇಲ್ಲ. ಆದ್ರೆ ಬಿಜೆಪಿಯ ಹಲವು ನಾಯಕರು, ನಾವೇ ಯುದ್ಧ ಮಾಡಿ ಉಗ್ರರನ್ನು ಸದೆ ಬಡಿದಿದ್ದೇವೆ ಎಂಬಂತೆ ವಿಜಯಯಾತ್ರೆ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ ಎನ್ನುವ ಮೂಲಕ ಟೀಕಿಸಿದರು.
ಆದರೆ ನಮ್ಮ ಯೋಧರ ಹತ್ಯೆ ನಂತರ ರಕ್ಷಣಾ ಇಲಾಖೆ ಕೈಗೊಂಡ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ ಕುಮಾರಸ್ವಾಮಿ, ಇದಕ್ಕೆ ಯಾವುದೇ ತಕರಾರು ಇಲ್ಲ ಎಂದರು. ಆದರೆ ಈ ರೀತಿಯ ಘಟನೆ ಏಕೆ ನಡೆಯುತ್ತಿದೆ? ಇದರಿಂದಾಗುವ ದುಷ್ಪರಿಣಾಮ ಸನ್ನಿವೇಶ ಎದುರಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಸಜ್ಜಾಗಿರಬೇಕು ಎಂದು ಹೇಳಿದರು. ಇದೇ ವೇಳೆ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 22 ಸ್ಥಾನ ಗೆಲ್ಲಿಸಿಕೊಡುವವರೆಗೂ ನಾನು ಮನೆ ಸೇರುವುದಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷರ ಹೇಳಿಕೆ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಆದರೆ ಅವರು ಇನ್ನಷ್ಟು ವಿಶ್ರಾಂತಿ ಪಡೆದು ನಂತರ ಹೋರಾಟ ಮಾಡೋದು ಸೂಕ್ತ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಸುಗಮವಾಗಿ ನಡೆಯಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv