ಉಡುಪಿ: ಕರ್ನಾಟಕದ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ರಿಲಾಕ್ಸ್ ಮೂಡ್‍ನಲ್ಲಿದ್ದು, ಇಂದು ಕಾಪು ಬೀಚ್ ಬಳಿ ವಾಕಿಂಗ್ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರು ಉಡುಪಿಯ ಕಾಪು ಸಮೀಪದ ಮೂಳೂರಿನಲ್ಲಿರುವ ಸಾಯಿರಾಧಾ ಹೆಲ್ತ್ ರಿಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಭಾನುವಾರ ತಡರಾತ್ರಿ ಒಂದು ಗಂಟೆಯವರೆಗೂ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರ ಜೊತೆ ಸಮಾಲೋಚನೆಯಲ್ಲಿ ನಿರತರಾಗಿದ್ದರು.
ಕುಮಾರಸ್ವಾಮಿ ಮೊದಲೇ ಈ ದಿನ ಯಾವುದೇ ಕಾರ್ಯಕರ್ತರನ್ನು ಭೇಟಿಯಾಗಲ್ಲ ಎಂದು ತಿಳಿಸಿದ್ದರು. ಹೀಗಾಗಿ ರೆಸಾರ್ಟ್ ಆವರಣದಲ್ಲಿ ಇಂದು ಯಾರೂ ಕಂಡುಬರಲಿಲ್ಲ. ಈ ಖಾಸಗಿ ಭೇಟಿಯನ್ನು ಸಿಎಂ ಸಂಪೂರ್ಣ ರಹಸ್ಯವಾಗಿರಿಸಿದ್ದು, ಭಾನುವಾರ ರಾತ್ರಿ ಮಾಧ್ಯಮದವರನ್ನು ಕಂಡು ಸಿಡಿಮಿಡಿಗೊಂಡಿದ್ದರು. ಹಾಗಾಗಿ ಇಂದು ಯಾವುದೇ ಕಾರಣಕ್ಕೂ ಮಾಧ್ಯಮದವರನ್ನು ಭೇಟಿಯಾಗದೇ ಇರಲು ನಿರ್ಧರಿಸಿದ್ದರು. ಹೀಗಾಗಿ ಸಿಎಂ ಮಾಧ್ಯಮಗಳ ಕ್ಯಾಮೆರಾದ ಕಣ್ಣಿಗೆ ಬೀಳಲಿಲ್ಲ. ಆದರೂ ಸಿಎಂ ಕಾಪು ಕಡಲತೀರದಲ್ಲಿ ರಿಲಾಕ್ಸ್ ಮೂಡಿನಲ್ಲಿರುವುದು ಮೊಬೈಲ್ ನಲ್ಲಿ ಸೆರೆಯಾಗಿದೆ.
ಭಾನುವಾರ ಕಾಲಿಗೆ ಮಸಾಜ್ ಮಾಡಿಸಿಕೊಂಡಿದ್ದ ಸಿಎಂ, ಬೇಡಿಕೆಗೆ ಅನುಸಾರ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಎರಡು ದಿನಗಳ ಕಾಲ ಈ ರೆಸಾರ್ಟ್ ನಲ್ಲಿ ತಂಗಲಿರುವ ಸಿಎಂ ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣ ದೂರ ಇರಲಿದ್ದಾರೆ. ಇಂದು ಬೆಳಿಗ್ಗೆ ಇಡ್ಲಿ-ವಡೆ, ನೀರ್ ದೋಸೆ, ಪೂರಿ ಬ್ರೇಕ್ ಫಾಸ್ಟ್ ಗೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನಕ್ಕೆ ಪೂರ್ಣ ಸಸ್ಯಾಹಾರ ವ್ಯವಸ್ಥೆ ಮಾಡಲಾಗಿದೆ.
ತನ್ಮಯ್ ಗೋಸ್ವಾಮಿ ಸೂಚನೆಯಂತೆ ಪ್ರಕೃತಿ ಚಿಕಿತ್ಸೆ ನಡೆಯಲಿದೆ. ಇದೇ ವೇಳೆ ಸಿಎಂ ಜೊತೆಗೆ ಸಚಿವರಾದ ಪುಟ್ಟರಾಜು, ಸಾರಾ ಮಹೇಶ್, ಶ್ರೀನಿವಾಸ್ ಶಾಸಕರಾದ ಶಿವಲಿಂಗೇಗೌಡ ಹಾಗೂ ಭೋಜೇಗೌಡ ಕಾಣಿಸಿಕೊಂಡಿದ್ದಾರೆ. ಮೂಳೂರು ಕಡಲತೀರಕ್ಕೆ ಫಿದಾ ಆಗಿರುವ ಸಿಎಂ, ಈ ಕುರಿತು ಜೊತೆಗಿದ್ದವರ ಜೊತೆಗೆ ಸಂತೋಷ ಹಂಚಿಕೊಂಡಿದ್ದಾರೆ.