ಹಾಸನ: ದಿನನಿತ್ಯ ಛತ್ರಿ ಹಿಡಿಸಿಕೊಂಡು ಸಿನಿಮಾ ಶೂಟಿಂಗ್ ನಲ್ಲಿರುತ್ತಿದ್ದರು. ಈಗ ಬಿಸಿಲಿಗೆ ಬಂದಿದ್ದಾರೆ. ಸ್ವಲ್ಪ ಸುತ್ತಾಡಲಿ. ನಮ್ಮ ರೈತರ ಕಷ್ಟ ಅರ್ಥವಾಗಲಿ ಎಂದು ಸಿಎಂ ಕುಮಾರಸ್ವಾಮಿ ಯಶ್ ಹಾಗೂ ದರ್ಶನ್ ಪ್ರಚಾರದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರು.
ಬಳಿಕ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಏನೇ ಪ್ರಯತ್ನ ಪಟ್ಟರೂ, ಎಷ್ಟೇ ಅಪಪ್ರಚಾರ ಮಾಡಿದರೂ ಮಂಡ್ಯ ಜನತೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದಿನ ಬೆಳಗಾದರೆ ಮಂಡ್ಯದ್ದೇ ಸುದ್ದಿ. ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಿ. ನಾನೇನು ಗಾಬರಿ ಆಗಿಲ್ಲ ಹಾಗೂ ಆತಂಕಗೊಂಡಿಲ್ಲ. ಮೇ 23ಕ್ಕೆ ಫಲಿತಾಂಶ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ಮಂಡ್ಯದಲ್ಲಿ ಕೆಲವು ಸಮಸ್ಯೆಗಳಾಗುತ್ತಿವೆ. ಇದರಿಂದ ಅಕ್ಕಪಕ್ಕದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಮಸ್ಯೆಯಾಗದಂತೆ ನಾನೇ ಖುದ್ದು ಬಗೆಹರಿಸುತ್ತಿದ್ದೇನೆ ಎಂದು ಹೇಳಿದರು.
ನರೇಂದ್ರ ಮೋದಿಗೂ ಇದು ಸುಲಭದ ಚುನಾವಣೆ ಅಲ್ಲ. ಏಕೆಂದರೆ 2014ಕ್ಕೂ 2019ಕ್ಕೂ ಸಾಕಷ್ಟು ಬದಲಾವಣೆ ಆಗಿದೆ. ನಮ್ಮನ್ನು ಕಿಚಡಿ ಪಾರ್ಟಿ ಅಂತಾರೆ. ಅವರು ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಮಾಡಿದರೆ ಪ್ರಾದೇಶಿಕ ಪಕ್ಷಗಳ ಮುಂದೆ ಹೋಗಿ ನಿಲ್ಲಬೇಕಿರಲಿಲ್ಲ. ರೈತರು ಈ ಬಿಜೆಪಿ ಅಧಿಕಾರದಿಂದ ನೊಂದಿದ್ದಾರೆ. ದೇವೇಗೌಡರಿಗೆ ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಶಕ್ತಿ ಬರೋ ವಾತಾವರಣ ಬರಲಿದೆ. ಹಾಗಂತ ಪ್ರಧಾನಿ ಆಗ್ತಾರೆ ಎಂದು ನಾನು ಹೇಳುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.