ಬೆಂಗಳೂರು: ವಿದೇಶ ಪ್ರವಾಸದಿಂದ ಬಂದ ಮುಖ್ಯಮಂತ್ರಿಗಳು ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ನನ್ನ ಕೆಲಸ ಏನು ಅದನ್ನು ನಾನು ಮಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿ ಒಳನಡೆದರು. ಭಾನುವಾರ ರಾತ್ರಿ ಸುಮಾರು 7.50ಕ್ಕೆ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು ಸಭೆಗಳ ಮೇಲೆ ಸಭೆ ನಡೆಸಿದರು. ಇಂದು ಬೆಳಗ್ಗೆ ಡಿಸಿಎಂ ಪರಮೇಶ್ವರ್ ಆಯೋಜನೆಯ ಉಪಹಾರ ಕೂಟದಲ್ಲಿ ಭಾಗಿಯಾಗಿದ್ದ ಎಲ್ಲ ಕಾಂಗ್ರೆಸ್ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸರ್ಕಾರ ಸುಭದ್ರವಾಗಿದ್ದು, ರಾಜಕೀಯ ಬೆಳವಣಿಗೆಯ ಬಗ್ಗೆ ಯಾವುದೇ ಆತಂಕ ನನಗಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಮೈ ಶುಗರ್ಸ್ ಕಂಪನಿ ಸ್ಥಾಪನೆ ಕುರಿತು ಚರ್ಚಿಸಲು ಆಧಿಕಾರಿ ಮತ್ತು ಕೆಲ ರೈತ ಮುಖಂಡರನ್ನು ಆಹ್ವಾನಿಸಿದ್ದೆ. ರಸ್ತೆಯಲ್ಲಿ ನಿಂತು ಬೈಯುವ ರೈತರನ್ನು ಆಹ್ವಾನಿಸಿಲ್ಲ. ಅಧಿಕಾರಿಗಳು ಮತ್ತು ರೈತ ಮುಖಂಡರ ಸಲಹೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದು ಸಿಎಂ ತಿಳಿಸಿದರು.
ಸಚಿವರು ರಾಜೀನಾಮೆ ನೀಡಿದ ಬಳಿಕ ಎಲ್ಲ ಬೆಳವಣಿಗೆಯ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಉಸ್ತುವಾರಿ ನಾಯಕ ವೇಣುಗೋಪಾಲ್ ಸ್ಪಷ್ಟಪಡಿಸಿದರು. ಕಾಂಗ್ರೆಸ್ ನಾಯಕರ ಸ್ಪಷ್ಟನೆ ಬಳಿಕ ಸಿಎಂ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಸಿಎಂ ಕುಮಾರಸ್ವಾಮಿ ಭಾನುವಾರ ಅಮೆರಿಕದಿಂದ ದೆಹಲಿಗೆ ಆಗಮಿಸಿ ರಾತ್ರಿ ಬೆಂಗಳೂರಿಗೆ ಬಂದ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ರಾತ್ರಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಸರಣಿ ಸಭೆ ನಡೆಸಿ ಇಂದು ಬೆಳಗ್ಗೆ ಎಚ್‍ಡಿಡಿ ಜೊತೆ ಮಾತುಕತೆ ನಡೆಸಿದ ಸಿಎಂ ಮಧ್ಯಾಹ್ನ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ವೇಳೆ ಸಿಎಂ ಈ ಹೇಳಿಕೆ ನೀಡಿದ್ದಾರೆ.