ಬೆಂಗಳೂರು: ಜಾರಕಿಹೊಳಿ ಸಹೋದರರು ಹಾಗೂ ಅತೃಪ್ತ ಶಾಸಕರ ಅಸಮಾಧಾನವನ್ನು ಶಮನಗೊಳಿಸಲು ಖುದ್ದು ಸಿಎಂ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ.
ಮಂಗಳವಾರ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಅತೃಪ್ತರಾಗಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ನಾಗೇಂದ್ರರವರು ಒಟ್ಟಿಗೆ ಭೇಟಿಯಾಗಿ ಸಭೆ ನಡೆಸುತ್ತಿದ್ದರು. ಈ ವೇಳೆ ದಿಢೀರ್ ಎಂದು ಹೋಟೆಲ್‍ಗೆ ಭೇಟಿ ನೀಡಿದ ಸೂಪರ್ ಸಿಎಂ ಹೆಚ್.ಡಿ.ರೇವಣ್ಣ ಅಧಿಕಾರಿಗಳ ಬಳಿ ಯಾರೆಲ್ಲಾ ಇದ್ದಾರೆಂದು ಮಾಹಿತಿ ಪಡೆದುಕೊಂಡು, ಬಳಿಕ ಯಾರಿಗೋ ಕರೆ ಮಾಡಿ ಹೋಟೆಲ್ ಪ್ರವೇಶಿಸಿದರು.
Advertisement
Advertisement
ಈ ಬೆಳವಣಿಗೆಯ ನಂತರ ಸಿಎಂ ಕುಮಾರಸ್ವಾಮಿಯವರು ತಾಜ್ ವೆಸ್ಟ್ ಎಂಡ್ ಹೋಟೆಲ್‍ಗೆ ಆಗಮಿಸಿ ಅತೃಪ್ತ ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ರೇವಣ್ಣ ಕೂಡ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
Advertisement
ತಾಜ್ ವೆಸ್ಟ್ ಎಂಡ್ ಹೋಟೆಲ್‍ಗೆ ಆಗಮಿಸುವ ಮೊದಲೇ ರಮೇಶ್ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಳಿ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಸಹೋದರ ಸತೀಶ್ ಜಾರಕಿಹೊಳಿಯವರೊಂದಿಗೆ ಮಾತನಾಡಲು ಹೋಟೆಲ್‍ಗೆ ಆಗಮಿಸುವಂತೆ ಸೂಚಿಸಿದ್ದರು. ಇವರ ಜೊತೆ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಕೂಡ ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ.
Advertisement
ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟದಿಂದಾಗಿ ಎಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅಪಾಯವುಂಟಾಬಹುದು ಎನ್ನುವ ಭೀತಿಯಿಂದ ನೇರವಾಗಿ ಸಿಎಂ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರ ಅಸಮಾಧಾನವನ್ನು ಶಮನಗೊಳಿಸಲು ಖುದ್ದು ಅಖಾಡಕ್ಕೆ ಇಳಿದಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv