ಕಲಬುರಗಿ: ಒಂದೆಡೆ ರೆಸಾರ್ಟ್ ಇನ್ನೊಂದೆಡೆ ಟೆಂಪಲ್ ರನ್, ಇವೆರಡು ಬಿಟ್ಟರೆ ಸಿಎಂ ಕುಮಾರಸ್ವಾಮಿ ಅವರಿಗೆ ಏನೂ ಕೆಲಸವಿಲ್ಲ ಅನಿಸುತ್ತೆ ಎಂದು ಚಿಂಚೋಳಿಯಲ್ಲಿ ಬಿಜೆಪಿ ಶಾಸಕ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ, ಕಾಂಗ್ರೆಸ್ ನವರಿಗೆ ಅಸ್ತಿತ್ವವೇ ಇಲ್ಲ. ಅವರು ತೋಡಿಕೊಂಡಿರುವ ಗುಂಡಿಯಲ್ಲಿ ಅವರೇ ಬಿದ್ದು ಹೋಗುತ್ತಾರೆ. ಯಾವತ್ತೂ ಕೂಡಾ ಕಲಿಯುಗ ಅಷ್ಟು ಸುಲಭ ಇಲ್ಲ. ಅವರ ಅವನತಿಯನ್ನು ಅವರೇ ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ರೆಸಾರ್ಟ್ ಇನ್ನೊಂದೆಡೆ ಟೆಂಪಲ್ ರನ್, ಇವೆರಡು ಬಿಟ್ಟರೆ ಸಿಎಂ ಕುಮಾರಸ್ವಾಮಿ ಅವರಿಗೆ ಏನೂ ಕೆಲಸವಿಲ್ಲ ಅನಿಸುತ್ತೆ ಎಂದು ಟೀಕಿಸಿದರು.
ಬಸವಣ್ಣನವರ ವಿಷಯವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮುಂದಾದರೆ ಅವರಂತಹ ಶತ ದಡ್ಡರು ಯಾರೂ ಇಲ್ಲ. ಜನರ ಕಷ್ಟ ಕೇಳಲು ಒಬ್ಬ ಅಧಿಕಾರಿ, ಸಿಎಂ ಇಲ್ಲ ಅನ್ನೋದು ವಿಪರ್ಯಾಸನಾ ಅಥವಾ ಹುಡುಗಾಟನಾ ಅಂತಾ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ಸಾಹೇಬರು ದೊಡ್ಡ ನಾಯಕರು. ತುಂಬಾ ದಿನ ಕಣ್ಣು ಮುಚ್ಕೊಂಡು ಹಾಲು ಕುಡಿಯಲು ಆಗಲ್ಲ. ಬೆಕ್ಕು ಕಣ್ಣು ಮುಚ್ಕೊಂಡು ಹಾಲು ಕುಡಿದ ಹಾಗೆ ನಾವು ಕೆಲಸ ಮಾಡಬಹುದು ಎಂಬ ಕಾಲ ಹೊರಟುಹೋಗಿದೆ. ಅವರು ಮಠಕ್ಕಾದರೂ ಹೋಗಲಿ, ದೇವಸ್ಥಾನಕ್ಕಾದರೂ ಹೋಗಲಿ. ಇನ್ನು ಮುಂದಾದರೂ ಅವರು ಆತ್ಮವನ್ನು ಶುದ್ಧವಾಗಿ ಇಟ್ಟುಕೊಂಡು ಎಲ್ಲರನ್ನೂ ಸಮಾನತೆಯಿಂದ ಕಾಣಲಿ ಎಂದು ಕಿಡಿಕಾರಿದರು.