ಮಂಡ್ಯ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ಕಾರು ನಿಲ್ಲಸಿ ತಮಗಾಗಿ ಕಾದು ಕುಳಿತಿದ್ದ ಪೋಷಕರ ಕಷ್ಟವನ್ನು ಆಲಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ಅವರಿಗಾಗಿ ಅನಾರೋಗ್ಯಪೀಡಿತ ತಂದೆ-ತಾಯಿ ಕಾದು ಕುಳಿತ್ತಿದ್ದರು. ಇಂದು ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಉತ್ತರ ಕ್ಷೇತ್ರದ ದೋಸ್ತಿ ಅಭ್ಯರ್ಥಿ ಪರ ಪ್ರಚಾರಗೊಂಡಿದ್ದರು. ಆದರೆ ಅದಕ್ಕೂ ಮೊದಲು ಜೆಡಿಎಸ್ ಸಚಿವರು ಮತ್ತು ಶಾಸಕರೊಂದಿಗೆ ಪುತ್ರನ ಗೆಲುವಿಗೆ ನಡೆಸಬೇಕಾದ ತಂತ್ರಗಾರಿಕೆ ಕುರಿತು ಗುಪ್ತ ಸಭೆ ನಡೆಸಿದ್ದಾರೆ.
ಸಭೆ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಮಾರ್ಗಮಧ್ಯೆ ಕಾದುನಿಂತಿದ್ದ ಮಗುವಿನ ಪೋಷಕರನ್ನು ಸಿಎಂ ಕುಮಾರಸ್ವಾಮಿ ಕಾರು ನಿಲ್ಲಿಸಿ ಅವರ ಕಷ್ಟ ಆಲಿಸಿದ್ದಾರೆ. ಆಗ ಮಗುವಿನ ಅನಾರೋಗ್ಯದ ಬಗ್ಗೆ ಸಿಎಂ ಬಳಿ ದಂಪತಿ ಹೇಳಿಕೊಂಡಿದ್ದರು. ನಂತರ ಅನಾರೋಗ್ಯಪೀಡಿತ ಮಗುವಿಗೆ ಚಿಕಿತ್ಸೆ ಕೊಡಿಸುವ ಭರವಸೆಯನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ.
ಅಷ್ಟೇ ಅಲ್ಲದೇ ನಾಳೆ (ಮಂಗಳವಾರ) ಬೆಂಗಳೂರಿನ ತಮ್ಮ ನಿವಾಸಕ್ಕೆ ಬಂದು ಭೇಟಿ ಮಾಡುವಂತೆ ಪೋಷಕರಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ನಂತರ ಕೆಆರ್‍ಎಸ್‍ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಈ ಹಿಂದೆಯೂ ಕೂಡ ಸಿಎಂ ಕುಮಾರಸ್ವಾಮಿ ಅವರು ಹೂ ಮಾರಾಟ ಮಾಡುತ್ತಿದ್ದ ಬಾಲಕಿಯ ಬಳಿ ಕಾರು ನಿಲ್ಲಿಸಿ ಮಾತನಾಡಿಸಿದ್ದರು.