ಬೆಂಗಳೂರು: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮನ್ನು ಮಹಾಭಾರತದ ಕರ್ಣನಿಗೆ ಹೋಲಿಸಿಕೊಳ್ಳುವ ಮೂಲಕ ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಾನು ಸಾಂದರ್ಭಿಕ ಶಿಶು ಅಂತಾ ಹೇಳಿದ್ದೇನೆ. ಮಹಾಭಾರತದಲ್ಲಿ ಕರ್ಣ ಸಹ ಸಾಂದರ್ಭಿಕ ಶಿಶು. ಅಂದು ಋಷಿಗಳ ವರ ಪ್ರಸಾದಿಂದ ಹುಟ್ಟಿದ ಸಾಂದರ್ಭಿಕ ಶಿಶುವನ್ನು ತಾಯಿ ಕುಂತಿ ನದಿಗೆ ಎಸೆದಿದ್ದಳು. ಆ ಮಗುವನ್ನು ಬೆಸ್ತ ಉಳಿಸಿ ಕಾಪಾಡಿದನು. ಅದೇ ಕರ್ಣನಿಗೆ ದುರ್ಯೋಧನ ತನ್ನ ಆಸ್ಥಾನದಲ್ಲಿ ಆಶ್ರಯ ನೀಡಿದ್ದನು. ಸಮ್ಮಿಶ್ರ ಸರ್ಕಾರದ ಸಾಂದರ್ಭಿಕ ಶಿಶುವಿಗೆ ಅಪ್ಪ-ಅಮ್ಮ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ನಮಗೆ ಅಪ್ಪ-ಅಮ್ಮ. ಇಂದು ಎಲ್ಲ ಶಾಸಕರು ಹಾಗು ದೇವರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಸಿಎಂ, ನನ್ನದು 37 ಶಾಸಕರ ಸರ್ಕಾರ ಅಲ್ಲ. ನಮ್ಮದು 120 ಜನ ನಾಯಕರ ಸರ್ಕಾರವಾಗಿದೆ. ಅವತ್ತು 12 ವರ್ಷಗಳ ಹಿಂದೆ 38 ಜನ ಶಾಸಕರು ಇದ್ದ ನನಗೆ ಬೆಂಬಲ ಕೊಟ್ಟಿದ್ದು ನೆನಪಿಲ್ವಾ? 84 ಜನ ಶಾಸಕರಿದ್ದ ಬಿಜೆಪಿ ಅವರು ಏಕೆ ಸಿಎಂ ಆಗಲಿಲ್ಲ. ಅಂದು ನೀವು ಬಿಜೆಪಿ ಶಾಸಕರು ನಮ್ಮ ಜೊತೆ ಸೇರಿಕೊಂಡಾಗ ಪ್ರಜಾಪ್ರಭುತ್ವದ ಕಗ್ಗೊಲೆ ಆಗಲಿಲ್ವಾ? ಅಂದು ನೀವು ನಮ್ಮ ಬಳಿ ಬಂದು ನಾನೇನು ನಿಮ್ಮನ್ನು ಸಿಎಂ ಮಾಡಿ ಎಂದು ಮನವಿ ಮಾಡಿಕೊಂಡಿರಲಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಯಾರು ಕರ್ಣ?
ಕುಂತಿಭೋಜನ ಮಗಳಾದ ಕುಂತಿಯೇ ಕರ್ಣನ ತಾಯಿ. ಬಾಲ್ಯದಲ್ಲಿ ಕುಂತಿಭೋಜನ ಮನೆಯಲ್ಲಿದ್ದ ಕುಂತಿ ದೂರ್ವಾಸನನ್ನು ಸತ್ಕರಿಸಿದ್ದಕ್ಕಾಗಿ ಮಂತ್ರಗಳ ವರವನ್ನು ಪಡೆದಿದ್ದಳು. ಈ ಮಂತ್ರದ ಮಹಿಮೆ ಹೇಗಿದೆ ಎನ್ನುವ ಕುತೂಹಲಕ್ಕೆ ಸೂರ್ಯಮಂತ್ರ ಜಪಿಸಲು ಸೂರ್ಯನಾರಾಯಣ ಆಕೆಗೆ ಗಂಡು ಮಗುವನ್ನು ಅನುಗ್ರಹಿಸಿದ್ದ. ಲೋಕಾಪವಾದಕ್ಕೆ ಹೆದರಿದ ಕುಂತಿ ತನ್ನ ಮರುಳುತನಕ್ಕಾಗಿ ಬೆದರಿ ಆ ಹಸುಗೂಸನ್ನು ಗಂಗಾನದಿಯಲ್ಲಿ ತೇಲಿಬಿಟ್ಟಳು. ಆ ಮಗು ಧೃತರಾಷ್ಟ್ರನ ಸಾರಥಿ ಅಧಿರಥನ ಕೈಗೆ ಸಿಕ್ಕಿತು. ಕವಚ ಕುಂಡಲಗಳ ಸಮೇತನಾಗಿ ಹುಟ್ಟಿದ ಆಕಾರಣಿಕ ಶಿಶುವನ್ನು ಅಧಿರಥ ತನ್ನ ಹೆಂಡತಿ ರಾಧೆಯ ಕೈಗೆ ಕೊಟ್ಟ. ಈ ಮಗು ಬೆಳೆದು ದೊಡ್ಡವನಾಗಿ ಕೀರ್ತಿ ಪಡೆದ ಕಾರಣ ದುರ್ಯೋಧನ ಅಂಗರಾಜ್ಯದ ರಾಜನನ್ನಾಗಿ ಕರ್ಣನನ್ನು ನೇಮಿಸಿದ್ದ.