ಬೆಂಗಳೂರು: ಬರ ಪರಿಹಾರ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 2,500 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ರಾಜ್ಯಕ್ಕೆ 900 ಕೋಟಿ ರೂ. ವಿತರಣೆ ಮಾಡಲಾಗಿದೆ. ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ರೂ. ನೀಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತಾರತಮ್ಯ ನೀತಿ ಅನಿಸರಿಸಿದ್ದು, ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.
ಬರ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರ್ಕಾರದ ತಾರಮ್ಯ ನೀತಿ ನನಗೆ ನೋವು ತಂದಿದೆ. ಮತ್ತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಹೆಚ್ಚಿನ ಹಣವನ್ನು ನೀಡುವಂತೆ ಮನವಿ ಮಾಡುತ್ತೇನೆ ಎಂದರು.
ಈ ವಿಚಾರವಾಗಿ ಕ್ಯಾಬಿನೆಟ್‍ನಲ್ಲಿ ಇಂದು ಚರ್ಚೆ ಮಾಡುತ್ತೇವೆ. ಇದು ಕೇಂದ್ರದ ತಾರತಮ್ಯ ನೀತಿ. ಮುಂದಿನ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಹಾರಾಷ್ಟ್ರಕ್ಕೆ ಹೆಚ್ಚು ಪರಿಹಾರ ನೀಡಲಾಗಿದೆ. ಕೇಂದ್ರದ ತೀರ್ಮಾನ ನಿರಾಸೆ ತಂದಿದೆ. ಚುನಾವಣೆ ಉದ್ದೇಶದಿಂದಲೇ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ರೂ.ವನ್ನು ನೀಡಿ, ಕರ್ನಾಟಕದ ಜನತೆಗೆ ಕೇಂದ್ರ ಮೋಸ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.
ಒಟ್ಟು 7,214 ಕೋಟಿ ರೂ. ಬಿಡುಗಡೆ:
7 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಮಂಗಳವಾರ 7,214 ಕೋಟಿ ರೂ. ಪರಿಹಾರ ಪ್ರಕಟಿಸಿದೆ. ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹಾಗೂ ವಿವಿಧ ಸಚಿವಾಲಯದ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಯಾವ ರಾಜ್ಯಕ್ಕೆ ಎಷ್ಟು?
ಮಹಾರಾಷ್ಟ್ರ 4,714 ಕೋಟಿ ರೂ., ಕರ್ನಾಟಕ 949.49 ಕೋಟಿ ರೂ., ಆಂಧ್ರ ಪ್ರದೇಶ 900 ಕೋಟಿ ರೂ., ಹಿಮಾಚಲ ಪ್ರದೇಶ 317 ಕೋಟಿ ರೂ., ಉತ್ತರ ಪ್ರದೇಶ 191 ಕೋಟಿ ರೂ., ಗುಜರಾತ್ 127 ಕೋಟಿ ರೂ., ಪುದುಚೆರಿ 13 ಕೋಟಿ ರೂ. ಪರಿಹಾರವನ್ನು ಬಿಡುಗಡೆ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv