ಬೆಂಗಳೂರು: ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುತ್ತೇವೆ ಎಂದು ಸಿಎಂ ಎಚ್‍ಡಿಕೆ ಘೋಷಣೆ ಮಾಡಿದ್ದಾರೆ.
ನಗರದ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧ ಗುರು ಅವರ ಪಾರ್ಥೀವ ಶರೀರ ಬಂದಿದ್ದಾಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರು ಅವರಿಗೆ ಹೂಗುಚ್ಛವನ್ನಿಟ್ಟು ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಹುತಾತ್ಮ ಗುರು ಕುಟುಂಬಕ್ಕೆ ಪರಿಹಾರ ಧನವನ್ನು ಫೋಷಿಸಿದರು. ಹುತಾತ್ಮ ಗುರು ಕುಟುಂಬದ ಸಂಪೂರ್ಣ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಹುತಾತ್ಮ ಗುರು ಅವರ ಪಾರ್ಥೀವ ಶರೀರ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಸಿಎಂ ಕುಮಾರಸ್ವಾಮಿ, ಎಂ.ಬಿ ಪಾಟೀಲ್, ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಹುತಾತ್ಮ ಗುರು ಅವರಿಗೆ ಹೂಮಾಲೆ ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.
ಸರ್ಕಾರ ಗುರು ಶವವವನ್ನು ಸಾಗಿಸಲು ಸೇನಾ ಹೆಲಿಕಾಪ್ಟರ್ ಕೇಳಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರದಿಂದ ಈ ಮನವಿ ಬಂದಿದ್ದರಿಂದ ಹೆಲಿಕಾಪ್ಟರ್ ನೀಡಲು ಸಾಧ್ಯವಿಲ್ಲ ಎಂದು ಸೇನೆ ತಿಳಿಸಿತ್ತು. ಹೀಗಾಗಿ ಗುರು ಪಾರ್ಥೀವ ಶರೀರ ಸೇನಾ ವಾಹನದಲ್ಲಿ ರಸ್ತೆ ಮೂಲಕ ಸಾಗುತ್ತಿದ್ದು, ಜನರು ರಸ್ತೆ ಇಕ್ಕೆಲದಲ್ಲಿ ನಿಲ್ಲುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೆಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಪುಲ್ವಾಮಾದ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಹೆಚ್. ಗುರು ಅವರ ಪಾರ್ಥಿವ ಶರೀರಕ್ಕೆ ಹೂಗುಚ್ಛವಿರಿಸಿ ಗೌರವ ಸಲ್ಲಿಸಿದ ಚಿತ್ರಸಂಪುಟ. pic.twitter.com/B7YddMQu8K
— CM of Karnataka (@CMofKarnataka) February 16, 2019
ಇದಕ್ಕೂ ಮೊದಲು ಮಾತನಾಡಿದ ಸಿಎಂ, ಹುತಾತ್ಮ ಯೋಧನ ಶರೀರ ಬರುವುದು ತಡವಾಗಿದೆ. ಆದಷ್ಟು ಬೇಗ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ತೆರಳುವ ವ್ಯವಸ್ಥೆ ಮಾಡಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯೋಧ ಗುರು ಅವರ ಮುಖ ದರ್ಶನ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆದಷ್ಟು ಬೇಗ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಈಗಾಗಲೇ ಸರ್ಕಾರ, ಜಿಲ್ಲಾಡಳಿತ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ನಾನು ಸಂಜೆ ಸುಮಾರು 4.30ಕ್ಕೆ ಅಂತ್ಯ ಸಂಸ್ಕಾರಕ್ಕೆ ಹೋಗುತ್ತೇನೆ ಎಂದು ಸಿಎಂ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv