ಬೆಂಗಳೂರು: ಅತೃಪ್ತ ಶಾಸಕರು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲ್ಲ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ. ಇತ್ತ ಬೆಂಗಳೂರಿಗೆ ಮುಖ್ಯಮಂತ್ರಿಗಳು ಬಂದ ಮೇಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸಿಎಂ ಸೇರಿದಂತೆ ಎಲ್ಲ ನಾಯಕರು ಮುಂದಾಗುತ್ತಿದ್ದಾರೆ. ಈ ಮೊದಲೇ ಪಬ್ಲಿಕ್ ಟಿವಿ ವರದಿ ಬಿತ್ತರಿಸಿದಂತೆ ಕೆಲ ಹಿರಿಯ ಸಚಿವರಿಂದ ರಾಜೀನಾಮೆ ಪಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಬೆಂಗಳೂರಿನ ಶಾಸಕರು ಸಿಎಂ ಮುಂದೆ ಎರಡು ಷರತ್ತುಗಳನ್ನು ಇಟ್ಟಿದ್ದು, ನಮ್ಮ ಬೇಡಿಕೆಗಳು ಪೂರ್ಣವಾದ್ರೆ ಮಂಗಳವಾರ ನಗರಕ್ಕೆ ಹಿಂದಿರುಗುತ್ತೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರನ್ನು ಬೆಂಗಳೂರು ಉಸ್ತುವಾರಿಯಿಂದ ಕೈ ಬಿಡಬೇಕು. ಆ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿಯವರನ್ನು ನೇಮಿಸಬೇಕೆಂಬ ಎರಡು ಷರತ್ತುಗಳನ್ನಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಸಿಎಂ 50:50 ಸೂತ್ರ:
ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಸಿಎಂ ಕಾಂಗ್ರೆಸ್ ನಾಯಕರ ಮುಂದೆ 50:50 ಸೂತ್ರವನ್ನು ಮುಂದಿಟ್ಟಿದ್ದಾರೆ. ಜೆಡಿಎಸ್ ಶಾಸಕರಾದ ಹೆಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣ ಗೌಡ ಮತ್ತು ಕಾಂಗ್ರೆಸ್‍ನ ರಮೇಶ್ ಜಾರಕಿಹೊಳಿ ಅವರನ್ನು ಕರೆತರುವ ಜವಾಬ್ದಾರಿ ನನ್ನದು ಎಂದು ಸಿಎಂ ಹೇಳಿದ್ದಾರೆ. ಇನ್ನುಳಿದ ಕಾಂಗ್ರೆಸ್ ಶಾಸಕರನ್ನು ಕರೆ ತರುವ ಜವಾಬ್ದಾರಿ ನಿಮ್ಮದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಸಿಎಂ 50:50 ಸೂತ್ರವನ್ನು ಕಾಂಗ್ರೆಸ್ ನಾಯಕ ಮುಂದಿಟ್ಟಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ನಾಯಕ ವೇಣುಗೋಪಾಲ್ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ ಎಂಬುವುದನ್ನು ಕಾದುನೋಡಬೇಕಿದೆ.
Advertisement
ಅತೃಪ್ತ ಶಾಸಕರ ಬೇಡಿಕೆಗಳಿಗೆ ನಾಯಕರು ಅಸ್ತು ಎಂದಿದ್ದಾರೆ ಎನ್ನಲಾಗಿದೆ. ಇತ್ತ ಸೋಮವಾರ ಕಾಂಗ್ರೆಸ್ ಎಲ್ಲ ಸಚಿವರ ಸಭೆಯನ್ನು ಪರಮೇಶ್ವರ್ ಅವರ ನಿವಾಸದಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಹಿರಿಯರಿಂದ ರಾಜೀನಾಮೆ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.