ಬೆಂಗಳೂರು: ಸದಾ ಸ್ವಾರಸ್ಯಕರ ಘಟನೆಗಳು, ಕಥೆಗಳ ಮೂಲಕ ಸದನದಲ್ಲಿ ಹಾಸ್ಯ ಚಟಾಕಿ ಹಾರಿಸೋ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿಕೆ ಇವತ್ತು ಸದನದಲ್ಲಿ ಗದ್ದಲ ಗಲಾಟೆಗೆ ಕಾರಣವಾಯಿತು. ಮಹಿಳೆಯರಿಗೆ ಸಂಬಂಧಿಸಿದ ಪದ ಬಳಕೆಗೆ ಬಿಜೆಪಿ ಸದಸ್ಯರು ಕೆರಳಿ ಕೆಂಡವಾದರು. ಇಬ್ರಾಹಿಂ ಹೇಳಿಕೆ ಖಂಡಿಸಿ ತೇಜಸ್ವಿನಿ ರಮೇಶ್ ಸದನದಿಂದ ಹೊರ ನಡೆದ ಘಟನೆಯೂ ನಡೀತು.
ಸಂವಿಧಾನದ ಮೇಲೆ ಮಾತನಾಡುತ್ತಿದ್ದ ಇಬ್ರಾಹಿಂ ಎಂದಿನಂತೆ ಹಾಸ್ಯ ಶೈಲಿಯಲ್ಲಿ ಭಾಷಣ ಮಾಡಿದರು. ಈ ವೇಳೆ ಸನ್ನಿವೇಶವೊಂದನ್ನ ಉಲ್ಲೇಖ ಮಾಡಿದರು. ಈಗ ಯಾರು ಎಲ್ಲಿಯೇ ಕೆಲಸ ಕೇಳಲು ಹೋದರೆ ಅನುಭವ ಕೇಳುತ್ತಾರೆ. ಅದಕ್ಕೆ ನಾನು ನಿನ್ನ ಮಗಳನ್ನು ಕೊಡುವಾಗ ಅಳಿಯನ ಅನುಭವ ಕೇಳಿದ್ದೀರಾ ಅಂತ ಕೇಳಿದೆ ಅಂತ ಇಬ್ರಾಹಿಂ ಪದ ಬಳಕೆ ಮಾಡುತ್ತಾರೆ.
ಇಬ್ರಾಹಿಂ ಪದ ಬಳಕೆಗೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸೇರಿದಂತೆ ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮದುವೆಗೆ ಮುನ್ನ ಅನುಭವ ಕೇಳುತ್ತೀರಲ್ಲ ಇದು ಮಹಿಳೆಯರಿಗೆ ಮಾಡುತ್ತಿರುವ ಅಪಮಾನ ಎಂದು ಇಬ್ರಾಹಿಂ ಹೇಳಿಕೆಯನ್ನು ಖಂಡಿಸಿದರು. ಇಬ್ರಾಹಿಂ ಮಾತಿಗೆ ಕೆರಳಿ ಕೆಂಡವಾದ ತೇಜಸ್ವಿನಿ ರಮೇಶ್, ಇಬ್ರಾಹಿಂ ಅವರ ಮಾತಿನಿಂದ ನಮಗೆ ನೋವಾಗಿದೆ. ಹೆಣ್ಣಿನ ಬಗ್ಗೆ ಬೇಕಾದಂತೆ ಮಾತನಾಡೋದಾದ್ರೆ ನಾನು ಹೊರ ಹೋಗುತ್ತೇನೆ. ಇದು ಸಂತೆಯಲ್ಲ. ಮಹಿಳೆಯರಿಗೆ ಅವಮಾನ ಮಾಡುತ್ತೀದ್ದೀರಾ ಎನ್ನುತ್ತಾ ಸದನದಿಂದ ಹೊರ ನಡೆದರು.
ನಂತರ ಬಿಜೆಪಿ ಸದಸ್ಯರು ಇಬ್ರಾಹಿಂ ವಿರುದ್ಧ ಮುಗಿಬಿದ್ದರು. ನಿಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದಾಗ ಅನುಭವ ಕೇಳಿದ್ರಾ ಎಂದು ಇಬ್ರಾಹಿಂರನ್ನು ಪ್ರಶ್ನಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೂಡಲೇ ಸಿಎಂ ಇಬ್ರಾಹಿಂ ಮಾತನ್ನ ಕಡಿತದಿಂದ ತೆಗೆಯಬೇಕು ಎಂದು ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಸದನದಲ್ಲಿ ಹೇಗೆ ಮಾತನಾಡಬೇಕು ಅಂತ ನಿಯಮ ಇದೆ. ಅದು ಎಲ್ಲರಿಗೂ ಗೊತ್ತಿದೆ. ಕೆಲವೊಮ್ಮೆ ಮಾತನಾಡುವಾಗ ಹೆಚ್ಚು ಕಡಿಮೆ ಆಗುವುದು ಸಹಜ. ಈಗ ಇಬ್ರಾಹಿಂ ತಪ್ಪಾಗಿ ಹೇಳಿದ್ದನ್ನ ವಾಪಸ್ ಪಡೆಯುವಂತೆ ಸಲಹೆ ನೀಡಿದರು. ಹೊರಟ್ಟಿ ಸಲಹೆಯಂತೆ ಸಿಎಂ ಇಬ್ರಾಹಿಂ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ವಿವಾದಕ್ಕೆ ತಿಲಾಂಜಲಿ ಹಾಡಿದರು. ಬಳಿಕ ತೇಜಸ್ವಿನಿ ರಮೇಶ್ ಸದನಕ್ಕೆ ಹಾಜರಾದರು.