ಕಲಬುರಗಿ: ಸಂಸತ್ ಕಲಾಪದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದುರ್ಗಿ ಕಂಡಂತಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಒಬ್ಬರೇ ಬಿಜೆಪಿಯ 400 ಜನ ಸಂಸದರನ್ನು ಸಮರ್ಥವಾಗಿ ಎದುರಿಸಿದ್ದಾರೆ. ಹೀಗಾಗಿಯೇ ಮಲ್ಲಿಕಾರ್ಜುನ ಖರ್ಗೆ ಅಂದ್ರೆ ಪ್ರಧಾನಿ ಮೋದಿ ಅವರಿಗೆ ದುರ್ಗಿ ನೆನಪಾಗುತ್ತಾಳೆ ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಮೇಲೆ ನನಗೆ ಮುಂಚೆಯಿಂದಲೂ ಅನುಮಾನವಿತ್ತು. ಅವರ ದೇಹದ ಅಂಗಾಂಗಳು ಒಂದಕ್ಕೊಂದು ಹೊಂದಾಣಿಕೆಯೇ ಆಗಲ್ಲ ಎಂದು ವ್ಯಂಗ್ಯ ಮಾಡಿದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ನನ್ನ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸುವಂತೆ ಒತ್ತಾಯಿಸಲಾಗಿದೆ. ಈ ಚುನಾವಣೆಯಲ್ಲಿ ಸಣ್ಣ ಸಣ್ಣ ಮರಿಗಳನ್ನು ಹಿಡಿದುಕೊಂಡು ಬಂದು ನನ್ನ ವಿರುದ್ಧ ಬೈಯಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಲೀಕಯ್ಯ ಗುತ್ತೇದಾರ ಮತ್ತು ಬಾಬುರಾವ್ ಚಿಂಚನಸೂರ್ ವಿರುದ್ಧ ವಾಗ್ದಾಳಿ ನಡೆಸಿದರು.