ಬಾಗಲಕೋಟೆ: ವಿರೋಧೀಗಳನ್ನ ಸದಾ ಏಕವಚನದಲ್ಲೇ ಟೀಕೆ ಮಾಡುವ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ತಮ್ಮ ಪಕ್ಷದ ನಾಯಕರನ್ನ ಹೊಗಳುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.
ಪಕ್ಷದ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ್ ಪರ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಬಿಜೆಪಿಯವರು ಯಾರೂ ಸತ್ತಿಲ್ಲ. ಕಾಂಗ್ರೆಸ್‍ನ ಇಂದಿರಾ ಗಾಂಧಿ, ರಾಹುಲ್ ಗಾಂಧಿ, ರಾಜೀವ್ ಗಾಂಧಿ ಸತ್ತಿದ್ದಾರೆ ಎಂದು ರಾಹುಲ್ ಹೆಸರು ಹೇಳಿದ್ರು. ಇದರಿಂದ ಸಭಿಕರೆದುರು ಇಬ್ರಾಹಿಂ ನಗೆಪಾಟಲೀಗೀಡಾದ್ರು.
ಬಳಿಕ ಮಾತನಾಡಿದ ಸಿದ್ದರಾಮಯಯ್ಯ, ಮೋದಿಗೆ ಸೋಲುವ ಕೇಡುಗಾಲ ಬಂದಿದೆ. ಇತ್ತ ಬಿಎಸ್‍ವೈ ರನ್ನ ಚುನಾವಣೆ ನಂತರ ಉಪ್ಪಿನಕಾಯಿ ತರ ಬಳಸಿ ಬಿಸಾಕ್ತಾರೆ ಎಂದು ಟೀಕೆ ಮಾಡಿದ್ರು. ಅಲ್ಲದೆ ನನ್ನ ಎದುರಾಳಿ ಯಾರೂ ಇಲ್ಲ ಎಂಬ ಮೋದಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಕೇಡುಗಾಲ ಬಂದಾಗ ಹಾಗೆನ್ನುತ್ತಾರೆ ಎಂದು ಕುಟುಕಿದ್ರು. ಕಾಂಗ್ರೆಸ್ ಒಂದೇ ಪಕ್ಷ 150 ಸ್ಥಾನ ಗೆಲ್ಲುತ್ತದೆ ಅಂದಿದ್ದೇನೆ. ನಮ್ಮದು ಅಲಿಯನ್ಸ್ ಇದೆ. ಎಲ್ಲ ಸೇರಿ ಒಟ್ಟು 300 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಅಂದ್ರು.
ಸಿದ್ದರಾಮಯ್ಯ ಕುರುಬ ಅಲ್ಲ, ಅವರ ಮೈಯಲ್ಲಿ ಕುರುಬರ ರಕ್ತ ಹರಿಯುತ್ತಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿ, ಈಶ್ವರಪ್ಪನಿಗೆ ನಾಚಿಕೆಯಾಗಬೇಕು. ಅವನು ಬಿಜೆಪಿಯಲ್ಲಿರೋದೆ ದಂಡ. ಒಬ್ಬ ಕುರುಬ ಸಮುದಾಯದವನಿಗೆ ಟಿಕೆಟ್ ಕೊಡಿಸೋಕೆ ಆಗಲಿಲ್ಲ ಅವನಿಗೆ ಎಂದು ಏಕ ವಚನದಲ್ಲಿ ಕಿಡಿಕಾರಿದ್ರು.
ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಅವರು ಸಾಂಕೇತಿಕವಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಗದ್ದಿಗೌಡರ್‍ಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಎಂ ಎಲ್ ಸಿ ಹನುಮಂತ ನಿರಾಣಿ, ಮಾಜಿ ಶಾಸಕ ಪಿ ಹೆಚ್ ಪೂಜಾರ ಸಾಥ್ ನೀಡಿದ್ರು. ಇವರು ಏಪ್ರಿಲ್ 4ರಂದು ಬೃಹತ್ ಮೆರವಣಿಗೆ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಆರ್ ರಾಮಚಂದ್ರನ್ ಗೆ ನಾಮಪತ್ರ ಸಲ್ಲಿಸಲಿದ್ದಾರೆ.