ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಾರ್ಚ್ 25 ರಂದು ನಾಮಪತ್ರ ಸಲ್ಲಿಸುತ್ತಾರೆ. ಕ್ಷೇತ್ರ ಮೂಲ ಕಾಂಗ್ರೆಸ್ ನಾಯಕರು ಮೈತ್ರಿಗೆ ಬೆಂಬಲ ನೀಡಿದ್ದಾರೆ. ಆದರೆ ಕೆಲವರು ಮಾತ್ರ ಹಿಂಬಾಗಿಲಿನಿಂದ ಬಹಳ ದೂರ ಸಾಗಿದ್ದು, ಅಂತಹವರ ಬಳಿ ನಾನು ಬೇಡಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ಜ್ಯೋತಿಷಿಗಳು ಇಂದು ಪ್ರಾಶಸ್ತ್ಯ ವಾದ ಸಮಯ ಇದೆ, ಒಂದು ಸೆಟ್ ನಾಮಪತ್ರ ಸಲ್ಲಿಸಿ ಎಂದು ಸಲಹೆ ನೀಡಿದ್ರು. ಆದರೆ ಕಾರ್ಯಕರ್ತರಲ್ಲಿ ಅನಗತ್ಯವಾಗಿ ಗೊಂದಲ ಉಂಟಾಗುವುದು ಬೇಡ ಎಂದು ಮಾರ್ಚ್ 25ರಂದು ನಾಮಪತ್ರ ಸಲ್ಲಿಕೆ ಆಗಲಿದೆ ಎಂದು ಸ್ಪಷ್ಟನೆ ನೀಡಿದರು.
ನಿಖಿಲ್ ಈಗಾಗಲೇ ಮಂಡ್ಯದ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಜಿ.ಮಾದೇಗೌಡ, ಮಾಜಿ ಸ್ಪೀಕರ್ ಕೆಆರ್ ಪೇಟೆ ಕೃಷ್ಣ ಹಾಗೂ ಆತ್ಮಾನಂದ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ಮೂಲ ಕಾಂಗ್ರೆಸ್ಸಿಗರು ಬೆಂಬಲ ನೀಡಿದ್ದು, ಕೆಲವರು ಮಾತ್ರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನಾನು ಅಂತಹವರ ಬಳಿ ಹೋಗಿ ಭಿಕ್ಷೆ ಬೇಡಲ್ಲ ಎಂದರು.
ನನ್ನ ಕಾರ್ಯಕರ್ತರು ಸಾಮರ್ಥರಿದ್ದು, ಗೆಲ್ಲಿಸಿಕೊಂಡು ಬರಲಿದ್ದಾರೆ. ಆದರೆ ರಾಜಕೀಯದಲ್ಲಿ ಯಾರು ಶತ್ರುಗಳು ಅಲ್ಲ, ಮಿತ್ರರು ಅಲ್ಲ. ಆದ್ದರಿಂದ ಅವರಿಗೆ ಪಕ್ಷ ಬಾಗಿಲು ಅವಕಾಶ ಇದೆ ಎಂದು ತಿಳಿಸಿದರು. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವೇಳೆ ಕೆಲ ಕಾಂಗ್ರೆಸ್ ನಾಯಕರು ರೆಬೆಲ್ ಆಗಿದ್ದರು. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಪರಿಣಾಮ ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಜೆಡಿಎಸ್ ಪಟ್ಟಿ ಶೀಘ್ರವೇ ಬಿಡುಗಡೆ ಆಗುತ್ತೆ. ದೇವೇಗೌಡರ ಸ್ಪರ್ಧೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಅವರಿಗೆ ಬಿಟ್ಟಿದ್ದೇವೆ. ಅವರು ತಮ್ಮ ತೀರ್ಮಾನ ತಿಳಿಸುತ್ತಾರೆ. ತುಮಕೂರು ಅಥವಾ ಬೆಂಗಳೂರು ಉತ್ತರ ಯಾವುದಾದರು ಒಂದು ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡುತ್ತಾರೆ. ಹಾಸನದಿಂದಲೇ ಸ್ಪರ್ಧಿಸಬೇಕು ಎಂಬ ಆಸೆ ಇದೆ. ಆದರೆ ಮೊದಲೇ ಪ್ರಜ್ವಲ್ ಸ್ಪರ್ಧೆಗೆ ಅವಕಾಶ ಕೊಟ್ಟು ಬಿಟ್ಟಿದ್ದಾರೆ ಎಂದರು.
ಮಾರ್ಚ್ 31ಕ್ಕೆ ಜೆಡಿಎಸ್, ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಲಿದ್ದು, ನೆಲಮಂಗಲ ರಸ್ತೆ ಅಥವಾ ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ. 5 ಲಕ್ಷ ಜನ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಂದಿನಿಂದಲೇ ಚುನಾವಣೆ ಪ್ರಚಾರ ಅಧಿಕೃತವಾಗಿ ಆರಂಭವಾಗುತ್ತದೆ ಎಂದು ವಿವರಿಸಿದರು.