ಬೆಂಗಳೂರು: ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಏಕಾಏಕಿ ನಾಮಪತ್ರ ಹಿಂದೆಗೆದುಕೊಂಡಿದ್ದರ ಮಾಹಿತಿ ನನಗೆ ಗೊತ್ತೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಕಣದಿಂದೆ ಹಿಂದೆ ಸರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಬುಧವಾರ ಬಳ್ಳಾರಿ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿ, ತಡರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದೆ. ಇಂದು ಬೆಳಗ್ಗೆ ಕನ್ನಡ ರಾಜ್ಯೋತ್ಸವದ ಸಲುವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಈ ವೇಳೆ ಪಕ್ಷದ ಕಾರ್ಯಕರ್ತರೊಬ್ಬರು ಚೀಟಿಯಲ್ಲಿ ಚಂದ್ರಶೇಖರ್ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ ಎಂದು ಬರೆದುಕೊಟ್ಟಿದ್ದರು. ಇವರು ಚೀಟಿ ಕೊಟ್ಟ ಬಳಿಕ ಚಂದ್ರಶೇಖರ್ ಬಿಜೆಪಿಯಿಂದ ಹಿಂದೆ ಸರಿದಿರುವ ಬಗ್ಗೆ ತಿಳಿಯಿತು. ಇದಕ್ಕೂ ಮುನ್ನ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿಸಿದರು.
Advertisement
Advertisement
ಬಿಜೆಪಿಯವರು ಚುನಾವಣೆಯ ಭರದಲ್ಲಿ ಇತರೆ ಪಕ್ಷದ ನಾಯಕರನ್ನು ಆಮೀಷವೊಡ್ಡಿ ತಮ್ಮತ್ತ ಸೆಳೆದುಕೊಂಡಿದ್ದರು. ಆದರೆ ಬಿಜೆಪಿಗೆ ಸೇರಿದ ನಾಯಕರನ್ನು ಸರಿಯಾಗಿ ನೋಡಿಕೊಳ್ಳದೇ ಇರಬಹುದು. ಅಲ್ಲದೇ ಬಿಜೆಪಿ ನಾಯಕರ ಬಂಡವಾಳ ಗೊತ್ತಾಗಿ, ಬೇಸರದಿಂದ ಅವರು ತಮ್ಮ ನಾಮಪತ್ರಗಳನ್ನು ಹಿಂತೆಗೆದು ಕೊಂಡಿರಬಹುದೆಂದು ನಾನು ಊಹಿಸುತ್ತೇನೆ. ಈ ಹಿಂದೆ ಎಸ್.ಎಂ.ಕೃಷ್ಣಾರನ್ನು ಬಿಜೆಪಿಗೆ ಸೇರಿಸಿಕೊಂಡಾಗಲೂ, ಬಿಜೆಪಿಯವರು ಹೀಗೆ ಮಾಡಿದ್ದರು. ಅವರು ಬಿಜೆಪಿ ಬಿಡುತ್ತೇನೆ ಎಂದು ಹೇಳಿದ ಮೇಲೆ ಅವರ ಕಡೆ ಗಮನ ಹರಿಸಿದರು ಎಂದರು.
Advertisement
ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದರೂ, ಪಕ್ಷದ ಕಾರ್ಯಕರ್ತರು ಮೈಮರೆಯಬೇಡಿ. ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಚುನಾವಣೆ ಮುಗಿಯುವವರೆಗೂ ಅಭ್ಯರ್ಥಿ ಪರ ಪ್ರಚಾರ ಮುಂದುವರಿಸಿ. ಭಾರೀ ಬಹುಮತದಿಂದ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಸಹಕರಿಸಿ ಎಂದು ಕೇಳಿಕೊಂಡರು. ಇದನ್ನೂ ಓದಿ: ಉಪಚುನಾವಣೆಗೆ ಸ್ಫೋಟಕ ಟ್ವಿಸ್ಟ್-ಚುನಾವಣೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ
Advertisement
ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಯಾರನ್ನೇ ದುಡ್ಡು ಕೊಟ್ಟು ಖರೀದಿಮಾಡುವ ಅವಶ್ಯಕತೆ ನನಗಿಲ್ಲ. ಹಾಗೇನಾದರೂ ಮಾಡಬೇಕೆಂದಿದ್ದರೆ, ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮೊದಲೇ, ನಾನು ಅವರನ್ನು ಕೊಂಡುಕೊಳ್ಳುತ್ತಿದ್ದೆ. ಬಿಜೆಪಿ ರೀತಿ ಮಾಡಲು ನನಗೆ ಬರುವುದಿಲ್ಲ. ಇದೂವರೆಗೂ ನಾನು ರಾಮನಗರಕ್ಕೆ ಕಾಲೇ ಇಟ್ಟಿಲ್ಲ. ದುಡ್ಡು ಕೊಟ್ಟು, ಆಮೀಷವೊಡ್ಡಿ ಇನ್ನೆಲ್ಲಿಂದ ಸೆಳೆಯಲಿ. ಬಿಜೆಪಿಯವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು, ನಮ್ಮ ಮೇಲೆ ಆರೋಪಿಸುತ್ತಿದ್ದಾರೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv