ಬೆಂಗಳೂರು: ಜೆಡಿಎಸ್ ಶಾಸಕ ಜಿಟಿ ದೇವೇಗೌಡರ ಖಾತೆ ಬದಲಾವಣೆಗೆ ಸಿಎಂ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ. ಜಿಟಿಡಿಗೆ ಉನ್ನತ ಶಿಕ್ಷಣ ಇಲಾಖೆ ಖಾತೆ ಬದಲಾಗಿ ಸಿಎಂ ಬಳಿ ಇರುವ ಅಬಕಾರಿ ಅಥವಾ ಸಹಕಾರ ಇಲಾಖೆ ನೀಡುವ ಸಾಧ್ಯತೆಗಳಿವೆ.
ಸೋಮವಾರ ಅಥವಾ ಮಂಗಳವಾರ ಖಾತೆ ಬದಲಾವಣೆ ಸಾಧ್ಯತೆಯಿದ್ದು, ಅಬಕಾರಿ ನೀಡಲು ಬಹುತೇಕ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಬಕಾರಿ ಜೊತೆಗೆ ಎಪಿಎಂಸಿ ನೀಡಲು ಸಿಎಂ ಒಪ್ಪಿಗೆ ಸೂಚಿಸಿದ್ದು, ಇದಕ್ಕೆ ಒಪ್ಪದೇ ಇದ್ರೆ ಬಂಡೆಪ್ಪ ಕಾಶಂಪೂರ್ ಬಳಿ ಇರೋ ಸಹಕಾರ ಇಲಾಖೆ ನೀಡುವುದು ಬಹುತೇಕ ಫಿಕ್ಸ್ ಆಗಿದೆ.
ಖಾತೆ ವಿಚಾರವಾಗಿ ಅಸಮಾಧಾನಗೊಂಡಿದ್ದ ಜಿಟಿ ದೇವೇಗೌಡ ಅವರು ಇತ್ತೀಚೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ,ಜನರಿಗೆ ಹತ್ತಿರ ಇರೋ ಖಾತೆ ಕೊಡುವಂತೆ ಕೇಳಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಕೂಡ ಒಪ್ಪಿಗೆ ನೀಡಿದ್ದಾರೆ. ಇನ್ನೂ ಎರಡು ಮೂರು ದಿನದಲ್ಲಿ ಖಾತೆ ಬದಲಾವಣೆ ಆಗಲಿದೆ ಎಂದು ತಿಳಿಸಿದ್ದರು.
ಜಿಟಿಡಿ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ ಬೆನ್ನಲ್ಲೇ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ರೈತರಿಗೆ ಹತ್ತಿರ ಇರೋ ಖಾತೆ ಕೊಡುವಂತೆ ಈ ಹಿಂದೆ ಕೂಡ ಜಿಟಿಡಿ ಅವರು ಮನವಿ ಮಾಡಿದ್ದರು.