ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಧನ್ಯವಾದ ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಮಠದ ಭಕ್ತರಲ್ಲಿ ಸಿಎಂ ಮನವಿಯನ್ನೂ ಮಾಡಿಕೊಂಡಿದ್ದಾರೆ.
ಇಂದು ಮಠಕ್ಕೆ ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಿದ್ದಗಂಗಾ ಶ್ರೀಗಳ ಆರೋಗ್ಯ ಅತ್ಯುತ್ತಮವಾಗಿದೆ. ಅವರ ಆರೋಗ್ಯವನ್ನ ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ವೈದ್ಯರು ಉತ್ತಮ ರೀತಿಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಹೇಳಿದ್ರು.
ಶ್ರೀಗಳಿಗೆ ಚಿಕಿತ್ಸೆ ಕೊಡೋದು ವೈದ್ಯರಿಗೆ ಸವಾಲಿನ ವಿಷಯವಾಗಿದೆ. ಅಂತದ್ದರಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಭಕ್ತರಿಗೆ ಆತಂಕ ಬೇಡ. ಸ್ವಾಮೀಜಿಗಳ ವಿಶ್ರಾಂತಿಗೆ ಅಡಚಣೆಯಾಗಬಾರದು ಅಂತ ಇದೇ ವೇಳೆ ಭಕ್ತರಲ್ಲಿ ಮನವಿ ಮಾಡಿಕೊಂಡರು.
ಶ್ರೀಗಳು ಇಳಿ ವಯಸ್ಸಿನಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪರಮಪೂಜ್ಯರು ಚೆನ್ನಾಗಿದ್ದಾರೆ. ಅವರ ವಿಶ್ರಾಂತಿಗೆ ತೊಂದರೆ ಕೊಡಬಾರದು ಅಂತಿದ್ದೆ. ಧಾರವಾಡದ 84 ನೇ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ಮಾರ್ಗ ಮಧ್ಯೆ ಪರಮಪೂಜ್ಯರ ದರ್ಶನಕ್ಕೆ ಬಂದಿದ್ದೇನೆ. ಕಿರಿಯ ಶ್ರೀಗಳ ಬಳಿ ಬರಬಹುದಾ ಅಂತಾ ಕೇಳಿ ಬಂದಿದ್ದೇನೆ ಅಂದ್ರು.
ಆಸ್ಪತ್ರೆಗೆ ದಾಖಲು:
ಶ್ರೀಗಳು ಬೇಗ ಗುಣಮುಖರಾಗಲು ಉತ್ತಮ ಆರೈಕೆ ಅಗತ್ಯವಿದ್ದು, ಸೋಂಕು ಬೇಗ ವಾಸಿಯಾಗಬೇಕು ಎಂಬ ಉದ್ದೇಶದಿಂದ ಅವರನ್ನು ಗುರುವಾರ ರಾತ್ರಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
“ಮಠದಲ್ಲಿ ನಾವು ಎಷ್ಟೇ ಜಾಗೃತಿ ವಹಿಸಿದರೂ ಕೂಡ ಸೋಂಕು ತಗಲುವ ಸಾಧ್ಯತೆ ಇತ್ತು. ಅಲ್ಲದೇ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಕೂಡ ಆಸ್ಪತ್ರೆಯಲ್ಲಿ ಲಭ್ಯವಾಗುವ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು. ಶ್ರೀ ಗಳಿಗೆ ಎಂದಿನಂತೆ ತಪಾಸಣೆ ಹಾಗೂ ಚಿಕಿತ್ಸೆ ಆಸ್ಪತ್ರೆಯಲ್ಲೇ ಮುಂದುವರಿಯುತ್ತದೆ. ಇಂದು ರೇಲಾ ಆಸ್ಪತ್ರೆಯಿಂದ ತಜ್ಞ ವೈದ್ಯರು ಕೂಡ ಆರೋಗ್ಯವನ್ನು ಚೆಕ್ ಮಾಡಿದ್ದಾರೆ. ಆದ್ದರಿಂದ ಯಾರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ” ಅಂತ ನಿನ್ನೆ ಕಿರಿಯ ಶ್ರೀಗಳು ಹೇಳಿದ್ದರು.
https://www.youtube.com/watch?v=pdPt-TVIzFE
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv