ಬೆಂಗಳೂರು: ರಾಜ್ಯವು ಬರದಿಂದ ತತ್ತರಿಸುವಾಗ ರಾಜ್ಯ ಸರ್ಕಾರ ಮೋಜು ಮಸ್ತಿಯಲ್ಲಿ ಮೈಮರೆತಿದೆ ಎಂದು ಟೀಕೆ ಮಾಡಿದ್ದ ಬಿಎಸ್ ಯಡಿಯೂರಪ್ಪ ವಿರುದ್ಧ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ಮಾನ್ಯ ವಿರೋಧ ಪಕ್ಷದ ನಾಯಕರು ಮಾಡಿರುವ ಟೀಕೆ ಹಾಸ್ಯಾಸ್ಪದವಾಗಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಕರೆಯಲು ಅನುಮತಿ ನೀಡಬಾರದು ಎಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಬಿಎಸ್‍ವೈ ಪತ್ರ ಬರೆದಿದ್ದರು. ಈಗ ಟೀಕೆ ಮಾಡಿರುವುದು ಅವರ ನಿರಂತರ ಇಬ್ಬಗೆ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಿಎಂ ತಿಳಿಸಿದ್ದಾರೆ.
Advertisement
Advertisement
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಅಧಿಕಾರಿಗಳಿದ್ದು ಅವರು ಈ ಅವಧಿಯಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಬರ ಪರಿಹಾರ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ನಿಯಮಿತವಾಗಿ ಮಾಹಿತಿಯನ್ನೂ ನೀಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಿಎಂ ವಿವರಿಸಿದ್ದಾರೆ.
Advertisement
ಉಡುಪಿಗೆ ತೆರಳುವ ಮುನ್ನ ಮುಖ್ಯ ಕಾರ್ಯದರ್ಶಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ಮಾಧ್ಯಮಗಳಲ್ಲಿ ಈ ಕುರಿತು ಪ್ರಕಟವಾಗಿರುವ ವರದಿಗಳನ್ನು ಯಡಿಯೂರಪ್ಪ ಅವರು ಗಮನಿಸಿಲ್ಲ ಎನಿಸುತ್ತದೆ. ರಾಜ್ಯದಲ್ಲಿ ಆರೋಗ್ಯ ಪ್ರವಾಸೋದ್ಯಮ ಪ್ರವರ್ಧಮಾನಕ್ಕೆ ಬರುತ್ತಿದ್ದು ಅಂತಹ ಒಂದು ಕೇಂದ್ರದಲ್ಲಿ ತಾವು ಚಿಕಿತ್ಸೆ ಪಡೆಯುತ್ತಿದ್ದೇವೆ. ಬಿಎಸ್‍ವೈ ಅವರು ಕೇವಲ ಸುದ್ದಿಗಾಗಿ ಇಂತಹ ಹೇಳಿಕೆಗಳನ್ನು ನೀಡುವ ಪ್ರವೃತ್ತಿಯನ್ನು ಕೈಬಿಡುವುದು ಒಳಿತು ಎಂದಿದ್ದಾರೆ.