ಮಂಡ್ಯ: ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
Advertisement
ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ ಬಗ್ಗೆ ಚರ್ಚೆ ಮಾಡುತ್ತಾರೋ ಎಂದು ವ್ಯಂಗ್ಯವಾಡಿದ್ರು.
Advertisement
Advertisement
ಸುಮಲತಾ ಅವರ ಅಭಿವೃದ್ಧಿ ಏನಿದೆ ಎಂದು ಮತ್ತೆ ಪ್ರಶ್ನಿಸಿದ ಸಿಎಂ, ಅವರು ಇಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಅಂಬರೀಶ್ ಸಂಸದರಾಗಿದ್ದಾಗ ಜನರ ಕಷ್ಟ-ಸುಖ ಕೇಳಿದ್ದಾರಾ. ಅಭಿವೃದ್ಧಿ ಬಗ್ಗೆ ಇವರ ಬಳಿ ನಾವು ಪಾಠ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
Advertisement
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಅಲೆ ಇದೆ. ನನಗೆ ಯಾವುದೇ ರೀತಿಯ ಆತಂಕಗಳು ಇಲ್ಲ. ಮಂಡ್ಯ ಜಿಲ್ಲೆಯ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನ ಆಯ್ಕೆ ಮಾಡಿ ಅಭಿವೃದ್ಧಿಗೆ ಚಾಲನೆ ಕೊಡುವ ದೃಷ್ಟಿಯಿಂದ ಈ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ನಿರ್ಧಾರದಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ನಿಖಿಲ್ ಸವಾಲೇನು?
ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸುಮಲತಾಗೆ ನಿಖಿಲ್ ಸವಾಲು ಹಾಕಿದ್ದರು.
ಸುಮಲತಾ ಏನ್ ಹೇಳಿದ್ದರು?
ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿ ಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದರು. ಅಲ್ಲದೆ ”Any time, any where..I am ready” ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದರು.
ನಿಖಿಲ್ ಪ್ರತಿಕ್ರಿಯೆ:
ಸುಮಲತಾ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಬುಧವಾರ ಕೆಆರ್ ನಗರದ ಬ್ಯಾಡರಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರತಿಕ್ರಿಯಿಸಿದ್ದ ನಿಖಿಲ್, ನಾನು ಯಾವ ಓಪನ್ ಚಾಲೆಂಜ್ ಕೂಡ ಕೊಟ್ಟಿಲ್ಲ. ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ನಂಗೆ ಗೊತ್ತಿಲ್ಲ. ನಾನು ಲೈವ್ ಆಗಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ತಂದೆ-ತಾಯಂದಿರು ಏನು ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಇದ್ದಾರೆಯೋ ಅವರಿಗೆ ನಾನು ಉತ್ತರಿಸಬೇಕಾಗಿದೆ ಎಂದು ತಿಳಿಸಿದ್ದರು.
ಇಲ್ಲಿ ಬೇರೆಯವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಹೀಗಾಗಿ ಏ.18ರ ವರೆಗೆ ಸಮಯ ವ್ಯರ್ಥ ಮಾಡದೇ ದಯವಿಟ್ಟು ಪ್ರಚಾರ ಮಾಡೋದಕ್ಕೆ ಹೇಳಿ. ಈ ಮೂಲಕ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಲು ಹೇಳಿ. ಆಮೇಲೆ ಮಾತನಾಡೋಣ ಎಂದು ನಿಖಿಲ್ ಸಲಹೆ ನೀಡಿದ್ದರು.