ಬೆಂಗಳೂರು: ಕಾಲಾ ಸಿನಿಮಾ ಬಿಡುಗಡೆ ಮಾಡಲು ನ್ಯಾಯಾಲಯ ಸೂಚನೆ ನೀಡಿದ್ದು, ಆದರೆ ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ಸಿನಿಮಾ ಬಿಡುಗಡೆ ಮಾಡದಿರುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಸಿಎಂ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಆದೇಶದ ಬಳಿಕ ಕನ್ನಡ ಪರ ಸಂಘಟನೆಗಳು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚಿತ್ರ ಬಿಡುಗಡೆ ಮಾಡದಿರಲು ಮನವಿ ಮಾಡಿದರು. ಚರ್ಚೆ ಬಳಿಕ ಮಾತನಾಡಿದ ಸಿಎಂ ಕುಮಾರ ಸ್ವಾಮಿ ಅವರು, ಸಿನಿಮಾ ಬಿಡುಗಡೆಯ ಕುರಿತು ಹೋರಾಟಗಾರರು ಹಾಗೂ ಕನ್ನಡ ಚಲನಚಿತ್ರ ಮಂಡಳಿ ಅಧ್ಯಕ್ಷರು ಕುರಿತು ಚರ್ಚೆ ನಡೆಸಿದ್ದಾರೆ. ಆದರ ನ್ಯಾಯಾಲಯದ ಸೂಚನೆಯ ಅನ್ವಯ ಚಿತ್ರ ಬಿಡುಗಡೆಗೆ ಬೇಕಾದ ಭದ್ರತೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ ಕುಮಾರಸ್ವಾಮಿ ಅವರು, ನಾನು ಸಿನಿಮಾ ನಿರ್ಮಾಣ, ಹಂಚಿಕೆ ಕುರಿತು ಅನುಭವ ಹೊಂದಿದ್ದೇನೆ. ಆದರೆ ಸಾಮಾನ್ಯ ವ್ಯಕ್ತಿಯಾಗಿ ತಾನು ಕನ್ನಡಿಗರ ಪರ ಇದ್ದೇನೆ. ಇದು ಭಾವನಾತ್ಮಕ ಅಂಶವಾಗಿರುವುದರಿಂದ ಸಿನಿಮಾ ಬಿಡುಗಡೆ ಮಾಡುವವರು ಚಿಂತನೆ ನಡೆಸಬೇಕಿದೆ. ಆದರೆ ಇಂತಹ ಸಮಯದಲ್ಲಿ ಚಿತ್ರ ಬಿಡುಗಡೆ ಸೂಕ್ತವಲ್ಲ. ಅಲ್ಲದೇ ಹೋರಾಟಗಾರರು ಚರ್ಚೆಯ ವೇಳೆ 2016 ರಲ್ಲಿ ನಾಗರಹಾವು ಸಿನಿಮಾ ಬಿಡುಗಡೆಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.