– ಇತ್ತ ಬಿಜೆಪಿ ಪ್ರತಿಭಟನೆಗೆ ನಿರ್ಧಾರ
ಬೆಂಗಳೂರು: ಈಗಾಗಲೇ ವಿಶ್ವಾಸಮತ ಯಾಚಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಕುಮಾರಸ್ವಾಮಿಗೆ ಸಾಲಮನ್ನಾ ಸಂಕಟ ಎದುರಾಗಿದೆ. ಈ ಬಗ್ಗೆ ಶುಕ್ರವಾರ ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ರು.
ಈ ವೇಳೆ ಅಧಿಕಾರಿಗಳು ಸಾಲಮನ್ನಾಗೆ ಇರುವ ಎಲ್ಲಾ ಅವಕಾಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಜ್ಯದ ಆರ್ಥಿಕ ಸ್ಥಿತಿ ಹೀನಾಯವಾಗಿಲ್ಲ. ಹಾಗಾಗಿ ಸಾಲಮನ್ನಾ ಘೋಷಣೆ ಕುರಿತು ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಸದ್ಯದಲ್ಲೇ ಎಚ್‍ಡಿಕೆ ನಿರ್ಧಾರ ಕೈಗೊಳ್ಳವ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯಡಿಯೂರಪ್ಪರ ಮಾನಸಿಕ ಅಸ್ಥಿರತೆಯ ಭಾಷಣ ನೋಡಿ ಅಯ್ಯೋ ಅನ್ನಿಸಿತು: ಹೆಚ್‍ಡಿಕೆ
ರೈತರ ಸಾಲಮನ್ನಾ ವಿಚಾರವಾಗಿ ಬಿಜೆಪಿಯೂ ಹೋರಾಟಕ್ಕೆ ಮುಂದಾಗಿದೆ. ನಿನ್ನೆ ಸದನದಲ್ಲಿ ಗುಡುಗಿದ್ದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಸೋಮವಾರದಿಂದ ಹೋರಾಟದ ಅಖಾಡಕ್ಕೆ ಇಳಿಯಲಿದ್ದಾರೆ. ರೈತರ ಸಾಲಮನ್ನಾಗೆ ಆಗ್ರಹಿಸಿ, ಪ್ರತಿಭಟನೆ ತೀವ್ರಗೊಳಿಸಲು ಬಿಜೆಪಿ ನಿರ್ಧರಿಸಿದೆ.
ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಇರೋದ್ರಿಂದ ಬೆಂಗಳೂರು ನಗರ ಹೊರತುಪಡಿಸಿ, ಸೋಮವಾರ ಕರ್ನಾಟಕದ ಉಳಿದೆಡೆಗಳಲ್ಲಿ ಬಿಜೆಪಿ ಸ್ವಯಂಪ್ರೇರಿತ ಬಂದ್‍ಗೆ ಕರೆ ನೀಡಲಿದೆ. ಈ ನಡುವೆ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ನಿರ್ಧರಿಸಿದ್ದು, ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಜನರ ಸ್ವಯಂ ಪ್ರೇರಿತ ಬಂದ್‍ಗೆ ಬಿಜೆಪಿ ಬೆಂಬಲ ನೀಡುತ್ತಿದೆ : ಸಿಟಿ ರವಿ