ಚೆನ್ನೈ: ಹಾಲಿ ಸಿಎಂ ಕುಮಾರಸ್ವಾಮಿ ಸೇರಿ ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಪಿತ್ತಕೋಶ ಸೋಂಕಿನ ಆಪರೇಷನ್ ಗೆ ಒಳಗಾಗಿದ್ದ ಸಿದ್ದಗಂಗಾ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.
Advertisement
ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ ಆರೋಗ್ಯವನ್ನು ವಿಚಾರಿಸಲು ಸಿಎಂ ಕುಮಾರಸ್ವಾಮಿ ಇಂದು ಸಂಜೆ 5ಕ್ಕೆ ವಿಶೇಷ ವಿಮಾನದಲ್ಲಿ ಚೆನ್ನೈಗೆ ತೆರಳಿದ್ದರು. ಚೆನ್ನೈ ವಿಮಾನ ನಿಲ್ದಾಣ ತಲುಪಿದ ಬಳಿಕ, ರಸ್ತೆ ಮೂಲಕ ರೇಲಾ ಆಸ್ಪತ್ರೆಯನ್ನು ತಲುಪಿ, ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.
Advertisement
ಸಿಎಂ ಕುಮಾರಸ್ವಾಮಿ ಆಗಮನಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಹಾಗೂ ಬಿ.ಎಸ್.ಯಡಿಯೂರಪ್ಪನವರು ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದರು.
Advertisement
Advertisement
ಶ್ರೀಗಳ ದರ್ಶನ ಪಡೆದ ಬಳಿಕ ಮಾತನಾಡಿದ ಎಸ್ ಎಂ ಕೃಷ್ಣ, ಶ್ರೀಗಳ ಆರೋಗ್ಯದ ಬಗ್ಗೆ ಇಡೀ ದೇಶದಲ್ಲಿ ಸ್ವಲ್ಪ ತಳಮಳದ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈ ದೈವಾಂಶಸಂಭೂತರು ನಮ್ಮೆಲ್ಲರ ಆಸ್ತಿ. ಶ್ರೀಗಳನ್ನು ನಾನು ನೋಡಿದೆ, ಅವರು ಬಹಳ ಹರ್ಷದಾಯಕವಾಗಿದ್ದಾರೆ. ನಾನು ನೇರವಾಗಿ ಅವರನ್ನು ಕಾಣಲಿಲ್ಲ. ಕಿಟಿಕಿಯ ಮೂಲಕ ನೋಡಿದ್ದೇವೆ. ಅವರು ಆರೋಗ್ಯವಾಗಿ ಇದ್ದಾರೆ. ದಯಮಾಡಿ ಎಲ್ಲರಲ್ಲೂ ನಾನು ಕೇಳಿಕೊಳ್ಳುವುದೇನೆಂದರೆ, ಪದೇ ಪದೇ ಶ್ರೀಗಳನ್ನು ಭೇಟಿ ಮಾಡುವುದರಿಂದ ಸೋಂಕು ಉಂಟಾಗಬಹುದು. ಹೀಗಾಗಿ ಯಾರೂ ಆಸ್ಪತ್ರೆಯ ಬಳಿ ಬರುವುದು ಬೇಡ. ಸ್ವಾಮಿಗಳ ಆರೋಗ್ಯಕ್ಕೆ ಆ ಶಿವನಲ್ಲಿ ಪ್ರಾರ್ಥನೆ ಮಾಡೋಣ. ಅವರು ಆದಷ್ಟು ಬೇಗ ಮಠಕ್ಕೆ ಬರುತ್ತಾರೆ. ಶ್ರೀಗಳ ವಿಲ್ ಪವರ್ ಹೆಚ್ಚಾಗಿದೆ. ಅವರ ಸೇವೆ ದೇಶಕ್ಕೆ ಇನ್ನೂ ಸಲ್ಲಬೇಕೆಂದು ಹೇಳಿದರು.
ಇದಾದ ಬಳಿಕ ರೇಲಾ ಆಸ್ಪತ್ರೆಗೆ ಬಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಯಡಿಯೂರಪ್ಪನವರು ಶ್ರೀಗಳ ದರ್ಶನದ ಬಳಿಕ ಮಾತನಾಡಿ, ಶ್ರೀಗಳ ದರ್ಶನ ಪಡೆದಿದ್ದೇನೆ. ಅವರು ಆರೋಗ್ಯವಾಗಿದ್ದಾರೆ. ಈ ದಿನ ಡಾ.ಮಹಮ್ಮದ್ ರೇಲಾ ಅವರಿಗೆ ಯಾವ ರೀತಿ ಅಭಿನಂದನೆ ಸಲ್ಲಿಸಬೇಕೋ ಗೊತ್ತಾಗುತ್ತಿಲ್ಲ. ನಾಡಿನ ಆರೂವರೆ ಕೋಟಿ ಜನರ ಪರವಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಶ್ರೀಗಳು ಆದಷ್ಟು ಬೇಗ ಮಠಕ್ಕೆ ಬರುತ್ತಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv