ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಮನೆ ನವೀಕರಣಕ್ಕೆ ದುಂದು ವೆಚ್ಚ ಮಾಡಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, ಮನಸ್ಸಿಗೆ ಬಂದಂತೆ ನವೀಕರಣ ಮಾಡಲು ಅನುಮತಿ ನೀಡಬಾರದು ಎಂದು ಈಗಾಗಲೇ ನಾನು ಆರ್ಥಿಕ ಇಲಾಖೆಗೆ ಸೂಚಿಸಿದ್ದೇನೆ. ರೇವಣ್ಣ ಮನೆ ನವೀಕರಣಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಆಗುತ್ತಿಲ್ಲ ಎಂದು ಅವರು ತಿಳಿಸಿದರು.
ಕುಮಾರಕೃಪಾದಲ್ಲಿ ಕಳೆದ ಡಿಸೆಂಬರ್ ನಲ್ಲೆ ಕಾಮಗಾರಿ ಪ್ರಾರಂಭವಾಗಿದ್ದು ನಮ್ಮ ಸರ್ಕಾರ ಯಾವುದೇ ಆದೇಶ ನೀಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೇ ಮಳೆ ನೀರು ಕಾಲುವೆಗೆ ಹೋಗುವಂತೆ ಪೈಪ್ ಲೈನ್ ಅಳವಡಿಕೆಗೆ ಅನುಮತಿ ನೀಡಲಾಗಿತ್ತು. ಕೋಟ್ಯಂತರ ರೂ ಖರ್ಚು ಮಾಡಲಾಗುತ್ತಿದೆ ಎಂದು ನಿಮಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ಕುಮಾರಸ್ವಾಮಿ ತಿಳಿಸಿದರು.
ಆರೋಪ ಏನು?
ಸಚಿವರ ರೇವಣ್ಣ ಅವರಿಗೆ ಶಿವಾನಂದ ಸರ್ಕಲ್ ಬಳಿ ಇರುವ ಕುಮಾರಕೃಪಾ ನಂಬರ್ 1 ನಿವಾಸ ಸಿಕ್ಕಿದೆ. ಸದ್ಯ ಆಷಾಢ ಮಾಸ ಇರೋದರಿಂದ ಸರ್ಕಾರಿ ಬಂಗಲೆಗೆ ಸಚಿವರು ಪ್ರವೇಶ ಮಾಡಿಲ್ಲ. ಆದರೆ ಪ್ರವೇಶಕ್ಕೂ ಮುನ್ನವೇ ವಾಸ್ತು ಪ್ರಕಾರ ಕಟ್ಟಡದ ನವೀಕರಣ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಹೆಚ್.ಸಿ.ಮಹಾದೇವಪ್ಪ ತಮ್ಮ ಪ್ರವೇಶದ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಡದ ನವೀಕರಣಗೊಳಿಸಿದ್ದರು. ಈಗ ಮತ್ತೆ ಅದೇ ಕಟ್ಟಡದ ನವೀಕರಣ ನಡೆಯುತ್ತಿದೆ.
ಮಳೆಯಾದರೆ ಕುಮಾರ ಕೃಪಾ ಮುಂದೆ ಮಳೆನೀರು ನಿಂತುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರನ್ನು ರಸ್ತೆಗೆ ತಿರುಗಿಸಿದ್ದಾರೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ ಎಂದು ಸಾರ್ವಜನಿಕರು ದೂರಿದ್ದರು.