ಬಿಜೆಪಿ ವಿಷಯಗಳನ್ನ ತಿರುಚುವುದರಲ್ಲಿ, ದೇಶ ಒಡೆಯೋದ್ರಲ್ಲಿ ನಿಸ್ಸೀಮರು: ಸಿಎಂ ಎಚ್‍ಡಿಕೆ

Public TV
2 Min Read
CM HDK BJP

ಬೆಂಗಳೂರು: ಬಿಜೆಪಿಯವ್ರು ತಾವೇ ಗಡಿ ದಾಟಿ ಉಗ್ರರ ಮೇಲೆ ದಾಳಿ ಮಾಡಿದವರಂತೆ ಪಟಾಕಿ ಸಿಡಿಸಿ, ಮೆರವಣಿಗೆ ನಡೆಸಿ ಸಂಭ್ರಮಿಸ್ತಿರೋದು ಅಶಾಂತಿಗೆ ಅವಕಾಶ ಮಾಡಿಕೊಟ್ಟಂಗೆ ಎಂದು ಹೇಳಿದ್ದ ಸಿಎಂ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

ನಗರದ ದಾಸರಹಳ್ಳಿಯಲ್ಲಿ ಮಾತನಾಡಿದ ಸಿಎಂ, ನಿನ್ನೆ ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ. ನಮ್ಮ ಯೋಧರು ಗಡಿ ರಕ್ಷಣೆ ಮಾಡುವ ಕೆಲಸ ಮಾಡುತ್ತಾರೆ. ಆದರೆ ಬಿಜೆಪಿ ಅವರು ದೇಶದೊಳಗೆ ಅಶಾಂತಿಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂದರು.

ಬಿಜೆಪಿಯವರು ಹೇಳಿಕೆಗಳನ್ನು ತಿರುಚಿ, ದೇಶ ಒಡೆಯುವುದರಲ್ಲಿ ನಿಸ್ಸೀಮರು ಎಂದು ಕಿಡಿಕಾರಿದ ಸಿಎಂ, ನಮ್ಮ ಯೋಧರು ದೇಶದ ರಕ್ಷಣೆಗೆ ಸಮರ್ಥರಿದ್ದು, ಅದನ್ನು ಅವರು ಮಾಡುತ್ತಾರೆ. ಆದರೆ ದೇಶದ ಒಳಗೆ ಬಿಜೆಪಿಯವರು ಅಶಾಂತಿಯ ವಾತಾವರಣಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ನಿನ್ನೆ ಅಂದಿದ್ದೇ. ನನ್ನ ಈ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದರು.

ಇತ್ತ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಬಿಜೆಪಿ ಸಂಭ್ರಮಕ್ಕೆ ಮುಖ್ಯಮಂತ್ರಿಗಳ ಆಕ್ಷೇಪ ಸರಿಯಲ್ಲ. ಇಡೀ ವಿಶ್ವವೇ ನಮ್ಮ ಸೇನೆಯ ಸಾಧನೆ ಕೊಂಡಾಡುತ್ತಿದೆ. ಮುಸ್ಲಿಮರೂ ಸಹ ಭಾರತೀಯರೇ ಆಗಿದ್ದು ನಮ್ಮ ವಿಜಯೋತ್ಸವದಿಂದ ಅವರಿಗೇನೂ ತೊಂದರೆ ಆಗಲ್ಲ ಎಂದರು.

‘ಜನ ಸೇವಕ’ ಯೋಜನೆಗೆ ಸಿಎಂ ಚಾಲನೆ: ಸರ್ಕಾರಿ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ನೂತನ ಜನ ಸೇವಕ ಯೋಜನೆಗೆ ಸಿಎಂ ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಲಾಗುತ್ತಿದ್ದು, ಇ- ಆಡಳಿತ ಇಲಾಖೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಸಿಎಂ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಈ ಕ್ಷೇತ್ರ ನನ್ನ ಹೃದಯದಲ್ಲಿ ಇದೆ. ಕ್ಷೇತ್ರದಲ್ಲಿ ಜನ ಸೇವಕ ಯೋಜನೆಗೆಳಿಗೆ ಚಾಲನೆ ಕೊಡುವುದಕ್ಕೆ ನನ್ನ ಸ್ವಾರ್ಥವೂ ಕಾರಣ. 1990-96 ನಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಿದಾಗ ಮತ ಕೊಟ್ಟು ಗೆಲ್ಲಿಸಿದ ಜನ ಈ ಕ್ಷೇತ್ರದಲ್ಲಿ ಇದ್ದಾರೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *