ಎಚ್‍ಡಿಕೆ ಬೇಜವಾಬ್ದಾರಿ ಸಿಎಂ – ಹೊಸ ವರ್ಷದಲ್ಲಿ ಏನಾದ್ರು ಆಗಬಹುದು : ಬಿಎಸ್‍ವೈ

Public TV
3 Min Read
BSY HDK 1

– ರಾಜ್ಯ ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು
– ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ

ಬೆಂಗಳೂರು: ರಾಜ್ಯದಲ್ಲಿ 156 ತಾಲೂಕುಗಳು ಬರದಿಂದ ತತ್ತರಿಸಿ ಹೋಗಿದ್ದು, ಹಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಬೇಜವಾಬ್ದಾರಿಯಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸಿಂಗಾಪುರ ಪ್ರವಾಸ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಿಡಿಕಾಡಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್‍ವೈ, ಸಿಎಂ ಎಚ್‍ಡಿಕೆ ಬೇಜವಾಬ್ದಾರಿ ಸಿಎಂ ಆಗಿದ್ದು, ಬರಗಾಲದಿಂದ ರಾಜ್ಯ ಜನತೆ ತತ್ತರಿಸುತ್ತಿದ್ದರೆ ಸಿಎಂ ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡುವುದು ಎಷ್ಟು ಸರಿ? ಅವರ ಸಚಿವ ಸಂಪುಟ ಸಹದ್ಯೋಗಿಗಳು ಹಲವರು ಹೊಸ ವರ್ಷ ಆಚರಣೆಗೆ ರಾಜ್ಯ ಬೇರೆ ಬೇರೆ ಕಡೆ ಹೋಗಿದ್ದಾರೆ. ರೈತರ ಸಾಲಮನ್ನಾ ಬಗ್ಗೆ ಪ್ರಶ್ನಿಸಿದರೆ ಕಥೆ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

bsy 1

ಸಮ್ಮಿಶ್ರ ಸರ್ಕಾರದ ನಾಯಕರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದು, ನನ್ನ ಸೋಲಿಗೆ ಕಾರಣರಾಗಿ ಸಿಎಂ ಸ್ಥಾನ ತಪ್ಪಿಸಿದ್ದಾರೆ ಎಂದು ಪದೇ ಪದೇ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೇಳುತ್ತಾರೆ. ಆಡಳಿತ ನಡೆಸುತ್ತಿರುವ ಎರಡು ಪಕ್ಷದ ಮುಖಂಡರ ನಡುವಿನ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಗೊಂದಲ ಇದೆ. ಸರ್ಕಾರ ಅಸ್ತಿರಗೊಳ್ಳುತ್ತಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ನೋಡಿ ನಾವು ಹೇಳಿಕೆ ಕೊಡುತ್ತಿದ್ದೇವೆ. ನಾವಾಗಿಯೇ ಸರ್ಕಾರ ಅಸ್ತಿರಗೊಳಿಸುತ್ತಿಲ್ಲ. ಒಂದೊಮ್ಮೆ ಸರ್ಕಾರ ತಾನಾಗಿಯೇ ಬಿದ್ದು ಹೋದರೆ ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ. ಹೊಸ ವರ್ಷದಲ್ಲಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಅಷ್ಟರ ಮಟ್ಟಿಗೆ ಕಾಂಗ್ರೆಸ್, ಜೆಡಿಎಸ್ ನಲ್ಲಿ ಅತೃಪ್ತಿ, ಅಸಮಾಧಾನ ಜಾಸ್ತಿಯಾಗಿದೆ. ಆದ್ದರಿಂದ ರಾಜ್ಯ ರಾಜಕಾರಣದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು ಎಂದರು.

siddaramaiah 1

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಬಿಎಸ್‍ವೈ, ಆಪರೇಷನ್ ಕಮಲದ ಮೂಲಕ ಶಾಸಕರ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪದೇ ಪದೇ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ರಾಜ್ಯ ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು. ಅವರ ಸರ್ಕಾರ ಬಿದ್ದರೆ ನಾವು ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿ ಸರ್ಕಾರ ರಚನೆ ಆದರೆ ಸಿದ್ದರಾಮಯ್ಯ ಅವರು ವಿರೋಧಿ ಪಕ್ಷದ ನಾಯಕರಾಗುತ್ತಾರೆ ಎಂದು ತಿಳಿಸಿದರು.

ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ: ಬಿಜೆಪಿ ರಾಷ್ಟ್ರೀಯ ಸಭೆ ನಡೆಯಲಿದ್ದು ಅಲ್ಲಿಗೆ ರಾಜ್ಯದಿಂದ ತೆರಳುವ ಕಾರ್ಯಕರ್ತರಿಗೆ ವ್ಯವಸ್ಥೆ ಮಾಡಬೇಕಿತ್ತು. ಅಲ್ಲದೇ ರಾಜ್ಯದ ಕೆಲ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಕೆಲ ಸಚಿವರನ್ನು ಭೇಟಿ ಮಾಡಿದ್ದೆ ಅಷ್ಟೇ. ಯಾವುದೇ ಆಪರೇಷನ್ ಕಮಲ ಇಲ್ಲ. ಜನವರಿಯಲ್ಲಿ ಜಂಟಿ ಅಧಿವೇಶನ ಕರೆಯಲಿದ್ದು, ಆಗ ಎಲ್ಲಾ ಶಾಸಕರು ಒಂದೆಡೆ ಸೇರುತ್ತಾರೆ. ಈ ಹಂತದಲ್ಲಿ ಏನಾದರೂ ಆಗಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಅಲ್ಲದೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕುರಿತ ಪ್ರಶ್ನೆಗೆ ಉತ್ತರಿಸಿ, ರಮೇಶ್ ಜಾರಕಿಹೊಳಿ ಅವರು ಎಲ್ಲೆಲ್ಲಿ, ಯಾರ ಜೊತೆ ತಿಂಡಿ ಮಾಡುತ್ತಾರೆ ಎಂಬುವುದು ಮಾಧ್ಯಮಗಳಿಗೆ ಗೊತ್ತಿರಬೇಕು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

RAMESH

ನಟ ಲೋಕನಾಥ್ ನಿಧನಕ್ಕೆ ಸಂತಾಪ: ಕನ್ನಡದ ಹಿರಿಯ ನಟ ಲೋಕನಾಥ್ ನಿಧನಕ್ಕೆ ಬಿಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದರು. 5 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಲೋಕನಾಥ್ ಅವರನ್ನ ಕಳೆದುಕೊಂಡ ನಾಡು ಹಾಗೂ ಚಿತ್ರರಂಗ ಬಡವಾಗಿದೆ. ಅವರ ಅಗಲಿಕೆ ನೋವನ್ನ ಸಹಿಸಿಕೊಳ್ಳುವ ಶಕ್ತಿಯನ್ನ ಭಗವಂತ ಅವರ ಕುಟುಂಬಕ್ಕೆ ಕೊಡಲಿ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *